ಹೊಸದಿಲ್ಲಿ : ಹರಿದ್ವಾರದ ಕುಂಭಮೇಳದಲ್ಲಿ ಪಾಲ್ಗೊಂಡು ಹಿಂದಿರುಗುವ ಯಾತ್ರಾರ್ಥಿಗಳು ಆಯಾ ರಾಜ್ಯಗಳಲ್ಲಿ ಕೊರೋನಾವನ್ನು ಪ್ರಸಾದವಾಗಿ ವಿತರಿಸುತ್ತಿದ್ದಾರೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ.
ಕೋವಿಡ್ನ ಎರಡನೇ ಅಲೆಯಿಂದ ದೇಶವು ತತ್ತರಿಸುತ್ತಿರುವ ಈ ಸಮಯದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ ಕುಂಭಮೇಳವನ್ನು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ನ ಮೇಯರ್ ಕಿಶೋರಿ ಪೆಡ್ನೇಕರ್ ಟೀಕಿಸಿದ್ದಾರೆ. ಕುಂಭಮೇಳದಲ್ಲಿ ಭಾಗವಹಿಸಿ ಮುಂಬೈಗೆ ಮರಳುವ ಯಾತ್ರಾರ್ಥಿಗಳಿಗೆ ಕ್ವಾರಂಟೈನ್ ಕಲ್ಪಿಸುವ ಬಗ್ಗೆ ತೀರ್ಮಾನಿಸಿರುವುದಾಗಿ ಮೇಯರ್ ಹೇಳಿದರು. ಯಾತ್ರಿಕರು ತಮ್ಮ ಸ್ವಂತ ಖರ್ಚಿನಲ್ಲಿ ಕ್ವಾರಂಟೈನ್ ವೆಚ್ಚವನ್ನು ಭರಿಸಬೇಕಾಗುತ್ತದೆ.
‘ಕುಂಭಮೇಳದಿಂದ ಆಯಾ ರಾಜ್ಯಗಳಿಗೆ ಮರಳುವವರು ಕೊರೋನಾವನ್ನು ಪ್ರಸಾದವಾಗಿ ವಿತರಿಸುತ್ತಿದ್ದಾರೆ. ಅವರನ್ನು ಸ್ವಂತ ಖರ್ಚಿನಲ್ಲಿ ಆಯಾ ರಾಜ್ಯಗಳಲ್ಲಿ ಕ್ವಾರಂಟೈನಿನಲ್ಲಿರಿಸಬೇಕು. ಮುಂಬೈಗೆ ಮರಳುವವರನ್ನು ಕ್ವಾರಂಟೈನಿನಲ್ಲಿರಿಸಲು ಕಾರ್ಪೋರೇಶನ್ ತೀರ್ಮಾನಿಸಿದೆ ಎಂದು ಮೇಯರ್ ಹೇಳಿರುವುದಾಗಿ ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಹಾರಾಷ್ಟ್ರದಲ್ಲಿ 24 ಗಂಟೆಗಳಲ್ಲಿ 63,729 ಜನರಿಗೆ ಕೋವಿಡ್ ದೃಢಪಟ್ಟಿದೆ. 398 ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜಧಾನಿ ಮುಂಬೈಯಲ್ಲಿ 8803 ಪ್ರಕರಣಗಳು ವರದಿಯಾಗಿವೆ. 53 ಜನರು ಸಾವನ್ನಪ್ಪಿದ್ದಾರೆ.