ಕಾಲೇಜಿಗೆ ಕೇಸರಿ ಶಾಲಿನೊಂದಿಗೆ ಪ್ರವೇಶ | ವಿದ್ಯಾರ್ಥಿಗಳಲ್ಲಿ ಕೋಮು ದ್ವೇಷ ಬಿತ್ತಲು ಪ್ರಯತ್ನಿಸುತ್ತಿರುವ ABVPಯ ನಡೆ ಖಂಡನೀಯ : ಕ್ಯಾಂಪಸ್ ಫ್ರಂಟ್

Prasthutha|

ಮಂಗಳೂರು : ದಿನಾಂಕ 14-04-2021 ರಂದು ವಿಟ್ಲದ ವಿಠ್ಠಲ ಪಿಯು ಕಾಲೇಜಿನಲ್ಲಿ ಎ.ಬಿ.ವಿ.ಪಿಯ ಕಾರ್ಯಕರ್ತರು ಕೇಸರಿ ಶಾಲನ್ನು ಧರಿಸಿಕೊಂಡು ತರಗತಿಗಳಿಗೆ ಪ್ರವೇಶಿಸಿದ್ದು ವಿದ್ಯಾರ್ಥಿಗಳಲ್ಲಿ ಕೋಮು ದ್ವೇಷ ಬಿತ್ತುವ ಪ್ರಯತ್ನವಾಗಿದೆ ಇದನ್ನು ಕ್ಯಾಂಪಸ್ ಫ್ರಂಟ್ ವಿಟ್ಲ ವಲಯ ಕಟು ಶಬ್ದಗಳಿಂದ ಖಂಡಿಸಿದೆ.

- Advertisement -

 ಜಿಲ್ಲೆಯಲ್ಲಿ ಇತ್ತೀಚಿಗೆ ಕೋಮುದ್ವೇಷದ ಅಮಲಿನಲ್ಲಿ ಅಮಾಯಕ ವಿದ್ಯಾರ್ಥಿಗಳ, ಸಾರ್ವಜನಿಕರ ಮೇಲೆ ಅಮಾನುಷವಾದ ಹಲ್ಲೆಗಳು ತೀವ್ರಗೊಳ್ಳುತ್ತಿವೆ. ಧರ್ಮತೀತವಾಗಿ ಕಾಲೇಜಿನ ಸಹಪಾಠಿಗಳು ಮತ್ತು ಸ್ನೇಹಿತರು ಜಿಲ್ಲೆಯಲ್ಲಿ ತಿರುಗಾಡುವಂತದ್ದು ಅಪರಾಧವಂತೆ ಬಿಂಬಿಸಲಾಗುತ್ತಿದೆ.  ಎಲ್ಲರಿಗೂ ಗೊತ್ತಿರುವ ಹಾಗೆ ಕೆಲ ದಿನಗಳ ಹಿಂದೆ ಮಂಗಳೂರು ನಗರದ ಪಂಪ್ವೆಲ್ ಬಳಿ ನಡೆದ ಹಲ್ಲೆ ಪ್ರಕರಣವೇ ಇದಕ್ಕೆ ಸಾಕ್ಷಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಪೊಲೀಸರು ಅರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಹಲ್ಲೆಗೆ ಕಾರಣ ಕೇವಲ ಅನ್ಯಧರ್ಮೀಯರು ಒಟ್ಟಿಗೆ ಸಂಚರಿಸುತ್ತಿರುವುದನ್ನು ಕೆಲ ಕೋಮು ಕ್ರಿಮಿಗಳಿಗೆ ಸಹಿಸಲಾಗುತ್ತಿಲ್ಲವೆಂಬುದಾಗಿದೆ.

ಇದರ ಮುಂದುವರಿದ ಭಾಗವೇ ವಿಟ್ಲದ ವಿಠ್ಠಲ ಪಿಯು ಕಾಲೇಜಿನಲ್ಲಿ ಎ.ಬಿ.ವಿ.ಪಿಯ ಕಾರ್ಯಕರ್ತರು ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಇಬ್ಭಾಗಿಸುವ ಷಡ್ಯಂತ್ರದಿಂದ ಒಮ್ಮಿಂದೊಮ್ಮೆ ಕೇಸರಿ ಶಾಲನ್ನು ಧರಿಸಿಕೊಂಡು ಕಾಲೇಜಿನ ತರಗತಿಗಳಿಗೆ ಪ್ರವೇಶಿಸಿದ್ದಾರೆ. ಇದು ನೇರವಾಗಿ ಕೋಮು ಧ್ರುವೀಕರಣ ಮಾಡುವ ಪ್ರಯತ್ನವಾಗಿದೆ. ಇತರ ಧರ್ಮದವರನ್ನು ಪ್ರತ್ಯೇಕಿಸಲು, ಇತರ ಧರ್ಮದ ವಿರುದ್ಧ ಪರಧರ್ಮೀಯ ವಿದ್ಯಾರ್ಥಿಗಳನ್ನು ಎತ್ತಿಕಟ್ಟಲು ಮತ್ತು ಕಾಲೇಜಿನ ಆರೋಗ್ಯಕರ ವಾತಾವರಣವನ್ನು ಹದಗೆಡಿಸುವ ಹೀನ ಕೃತ್ಯವಾಗಿದೆ. ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

- Advertisement -

ಇಂತಹ ಘಟನೆಗಳು ಮುಂದುವರೆದರೆ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣವು ಉಂಟಾಗಬಹುದು. ಇದರಿಂದಾಗಿ ಕಾಲೇಜುಗಳಲ್ಲಿ ಕೋಮು ದ್ವೇಷ ಬಿತ್ತಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾಲೇಜಿನ ಆಡಳಿತ ಮಂಡಳಿಯು ಕ್ರಮ ಕೈಗೊಂಡು ಮುಂದೆ ಆಗುವ ಅನಾಹುತಕ್ಕೆ ತೆರೆಯಳೆಯ ಬೇಕೆಂದು ಕ್ಯಾಂಪಸ್ ಫ್ರಂಟ್ ವಿಟ್ಲ ಅಧ್ಯಕ್ಷರಾದ ಫಯಾಝ್ ಕಲ್ಲಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp