ಕೊರೋನಾ ಸೋಂಕಿಗೆ ತುತ್ತಾದ ಕುಮಾರಸ್ವಾಮಿಗೇ ಬೆಡ್ ಇಲ್ಲ ಎಂದ ಮಣಿಪಾಲ್ ಆಸ್ಪತ್ರೆ !

Prasthutha|

►ಆರೋಗ್ಯ ಮಂತ್ರಿ ಡಾ. ಸುಧಾಕರ್ ಹೇಳಿದ್ರೂ ಸಿಗದ ಬೆಡ್ !
►ರಾಜ್ಯ ಸರ್ಕಾರದ ಕೈಮೀರಿದೆಯೇ ಕೋವಿಡ್ ?

- Advertisement -

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೋನಾ ಸೋಂಕು ತಗಲಿದ್ದು, ಚಿಕಿತ್ಸೆ ಪಡೆಯಲು ಮಣಿಪಾಲ್ ಆಸ್ಪತ್ರೆ ಸೇರಬಯಸಿದ ಅವರಿಗೆ ಬೆಡ್ ಸಿಕ್ಕಿಲ್ಲ. ಕುಮಾರಸ್ವಾಮಿಯಂತಹ ಪ್ರಭಾವಿ ನಾಯಕರಿಗೇ ಈ ಸ್ಥಿತಿ ಬಂದಿರುವಾಗ ಸೋಂಕು ತಗಲಿರುವ ಸಾಮಾನ್ಯ ಜನ ಚಿಕಿತ್ಸೆಗಾಗಿ ಬೆಡ್ ಪಡೆಯಲು ಏನು ಮಾಡಬೇಕು?ಎಂಬ ಮಾತು ಕೇಳಿ ಬರತೊಡಗಿದೆ. ಅಂದ ಹಾಗೆ ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕೆ ಹೋಗಿದ್ದ ಕುಮಾರಸ್ವಾಮಿ ಅವರಿಗೆ ಶುಕ್ರವಾರ ಸಂಜೆಯೇ ದಣಿವು ಕಾಣಿಸಿಕೊಂಡಿದೆ. ಹೀಗಾಗಿಯೇ ಬೆಂಗಳೂರಿಗೆ ಮರಳಿದವರು ಮನೆಗೆ ಹೋಗದೆ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದಾರೆ.

ಇಂದು ಬೆಳಿಗ್ಗೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆಗೊಳಗಾದ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ಧೃಢಪಟ್ಟಿದೆ. ಹೀಗಾಗಿ ವೈದ್ಯರ ಬಳಿ ಮಾತುಕತೆ ನಡೆಸಿ, ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆದು ಚಿಕಿತ್ಸೆ ಪಡೆಯುವುದಾಗಿ ಅವರು ಹೇಳಿದ್ದಾರಾದರೂ ವೈದ್ಯರು ಅದನ್ನೊಪ್ಪಿಲ್ಲ. ಈ ವಿಷಯದಲ್ಲಿ ರಿಸ್ಕ್ ಬೇಡ. ಹೀಗಾಗಿ ತಕ್ಷಣವೇ ಆಸ್ಪತ್ರೆಗೆ ಅಡ್ಮಿಟ್ ಆಗಿ ಎಂದವರು ಹೇಳಿದ್ದಾರೆ. ಹೀಗಾಗಿ ಮಣಿಪಾಲ್ ಆಸ್ಪತ್ರೆ ಸೇರಲು ನಿರ್ಧರಿಸಿದ ಅವರು ಸಂಬಂಧಿಸಿದವರನ್ನು ಸಂಪರ್ಕಿಸಿದರೆ, ಬೆಡ್ ಇಲ್ಲ ಎಂಬ ಉತ್ತರ ಸಿಕ್ಕಿದೆ.

- Advertisement -

ಈ ಮಧ್ಯೆ ವಿಷಯ ತಿಳಿದ ಕೂಡಲೇ ಆರೋಗ್ಯ ಸಚಿವ ಸುಧಾಕರ್ ಅವರು ಕುಮಾರಸ್ವಾಮಿ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ದೊರಕಿಸಿಕೊಡಲು ಯತ್ನಿಸಿದ್ದಾರಾದರೂ ಅದು ಫಲ ಕೊಟ್ಟಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರು ಮತ್ತೊಂದು ಖಾಸಗಿ ಆಸ್ಪತ್ರೆಗೆ ಫೋನು ಮಾಡಿದ್ದರ ಫಲವಾಗಿ ಬೆಡ್ ಸಿಕ್ಕಿದೆ. ಅದರೆ ಬೆಡ್ ಸಿಕ್ಕರೂ ಅವರು ತಕ್ಷಣ ಅಡ್ಮಿಟ್ ಆಗಲಾಗಿಲ್ಲ.ಬದಲಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಇಂದು ಅವರು ಹಾಜರಾಗಲೇ ಬೇಕಿದೆ.  ಆದರೆ ಕೊರೋನಾ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದು ಅಪಾಯ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ ಕುಮಾರಸ್ವಾಮಿ, ಈಗ ಕ್ಯಾಮೆರಾ ಮುಂದೆ ಕೂತಿದ್ದಾರೆ. ನ್ಯಾಯಾಲಯದ ವಿಚಾರಣೆ ಮುಗಿದ ನಂತರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲಿದ್ದಾರೆ.  ವಿಧಾನಪರಿಷತ್ ಸದಸ್ಯ ಎಚ್ ಎಂ ರಮೇಶಗೌಡ ಅವರು ಈ ಮಾಹಿತಿ ನೀಡಿದ್ದಾರೆ.



Join Whatsapp