ಉಪವಾಸ ಮುರಿದು ಹಿಂದೂ ಮಹಿಳೆಯರಿಬ್ಬರಿಗೆ ಪ್ಲಾಸ್ಮಾ ದಾನ ಮಾಡಿ ಜೀವವುಳಿಸಿದ ಅಕೀಲ್ ಮನ್ಸೂರಿ !

Prasthutha|

ಉದಯಪುರ : ಕಳೆದೊಂದು ವರ್ಷದಿಂದ ಜಗತ್ತಿನಲ್ಲಿ ತನ್ನ ರಣಕೇಕೆ ಹಾಕುತ್ತಿರುವ ಕೊರೋನಾವನ್ನು ನಿರ್ದಿಷ್ಟ ಧರ್ಮವೊಂದರ ತಲೆ ಮೇಲೆ  ಮೇಲೆ ಕಟ್ಟಲು ಕಳೆದ ವರ್ಷದಿಂದ ಕೆಲ ಕ್ಷುದ್ರ ಮನೋಸ್ಥಿತಿಗಳು ವಿಫಲ ಪ್ರಯತ್ನ ನಡೆಸುತ್ತಿರುವ ಮಧ್ಯೆಯೇ ಹಲವು ಚೇತೋಹಾರಿ ಸುದ್ದಿಗಳು ಕೂಡಾ ಬಹಿರಂಗಗೊಳ್ಳುತ್ತಿದೆ. ರಾಜಸ್ಥಾನದಲ್ಲಿ ಎರಡು ಹಿಂದೂ ಮಹಿಳೆಯರು ಕೋವಿಡ್ ಪೀಡಿತರಾಗಿ ಗಂಭೀರಾವಸ್ಥೆಗೆ ತಲುಪಿದ್ದರು. ಅವರು ಆಕ್ಸಿಜನ್ ವ್ಯವಸ್ಥೆಯಲ್ಲಿದ್ದರು. ಅವರಿಗೆ ತುರ್ತಾಗಿ ಎ+ ಪ್ಲಾಸ್ಮಾ ಅಗತ್ಯವಿತ್ತು. ರಕ್ತದಾನಿಗಳ ಗುಂಪಿನ ಹಾಗೂ ಸಾಮಾಜಿಕ ತಾಣಗಳ ಮೂಲಕ ಈ ವಿಷಯ ತಿಳಿದುಕೊಂಡ ಅಕೀಲ್ ಮನ್ಸೂರಿ ಎನ್ನುವ ರಾಜಸ್ಥಾನದ ಯುವಕ ರಕ್ತ ಯುವ ವಾಹಿನಿ ಗುಂಪೊಂದರ ಮನವಿಗೆ ಕೂಡಲೇ ಸ್ಪಂದಿಸಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಇದಕ್ಕಾಗಿ ಅಕೀಲ್ ಮನ್ಸೂರಿ ತಮ್ಮ ಈ ವರ್ಷದ ರಂಝಾನಿನ ಮೊದಲ ದಿನದ ವ್ರತವನ್ನು ತೊರೆಯಬೇಕಾಗಿ ಬಂದಿರುವುದು ಗಮನಾರ್ಹವಾಗಿದೆ.

- Advertisement -

ಅಕೀಲ್ ಅವರು ಕಳೆದ ಸೆಪ್ಟಂಬರ್ ನಲ್ಲಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದರು. ಆ ಬಳಿಕ ಮೂರು ಬಾರಿ ಪ್ಲಾಸ್ಮಾ ದಾನ ಮಾಡಿವ ಅನುಭವ ಅವರಿಗಿತ್ತು. ಅವರ ಜೀವನದಲ್ಲಿ ಒಟ್ಟು 17 ಬಾರಿ ಅವರು ಪ್ಲಾಸ್ಮಾ ದಾನ ಮಾಡಿದ್ದಾರೆ. “ಪ್ಲಾಸ್ಮಾ ಅವಶ್ಯಕತೆಯ ತುರ್ತು ಸಂದೇಶವನ್ನು ನೋಡಿದ ಕೂಡಲೇ ನಾನು ಆಸ್ಪತ್ರೆಗೆ ಧಾವಿಸಿದೆ. ಉದಯಪುರ ಫೆಸಿಫಿಕ್ ಆಸ್ಪತ್ರೆಯ ವೈದ್ಯರು ಅಲ್ಲಿನ ಪ್ಲಾಸ್ಮಾ ನೀಡಲು ಬಯಸಿದ್ದರು, ಆದರೆ ಅವರಿಗೆ ಸಕಾಲಕ್ಕೆ ಅದು ಸಾಧ್ಯವಾಗಿರಲಿಲ್ಲ. ನಾನು ಆಸ್ಪತ್ರೆ ತಲುಪಿ ಪ್ಲಾಸ್ಮಾ ದಾನ ಮಾಡಲು ತಯಾರಾದಾಗ ವೈದ್ಯರು ಏನಾದರೂ ತಿನ್ನಲು ಹೇಳಿದ್ದರು. ಖಾಲಿ ಹೊಟ್ಟೆಯಲ್ಲಿ ದಾನ ಮಾಡುವಂತಿಲ್ಲ. ಆ ವೇಳೆ ಆಸ್ಪತ್ರೆಯಲ್ಲಿ ನೀಡಿದ ಆಹಾರವನ್ನು ತಿಂದು ನಾನು ನನ್ನ ಉಪವಾಸ ತೊರೆದೆ. ಆ ಬಳಿಕ ಪ್ಲಾಸ್ಮಾ ದಾನ ಮಾಡಿದೆ” ಎಂದು ಅಕೀಲ್ ಘಟನೆ ಬಗ್ಗೆ ಹೇಳುತ್ತಾರೆ.

ಆಸ್ಪತ್ರೆಯ ಸಿಬ್ಬಂದಿಗಳು ಪ್ರಶಂಸೆಯ ಮಾತುಗಳನ್ನಾಡುವಾಗ ನಾನು ಅದೇನು ಮಹಾನ್ ಸಾಧನೆ ಮಾಡಲಿಲ್ಲ ಎಂದು ಅಕೀಲ್ ವಿನಯದಿಂದ ಹೇಳುತ್ತಾರೆ. ಓರ್ವ ಮನುಷ್ಯನಾಗಿ ಅದು ನನ್ನ ಜವಾಬ್ದಾರಿಯಾಗಿತ್ತು. ಆ ಇಬ್ಬರು ಮಹಿಳೆಯರು ಶೀಘ್ರ ಗುಣಮುಖರಾಗಿ ಮನೆಗೆ ತಲುಪುವಂತಾಗಲು ನಾನು ಪ್ರಾರ್ಥಿಸುತ್ತಿದ್ದೇನೆ” ಎಂದು ಅಕೀಲ್ ಹೇಳುತ್ತಾರೆ.    



Join Whatsapp