►ಹಾಸನದಲ್ಲಿ ಕದ್ದ ಪಿಸ್ತೂಲು ಮಂಗಳೂರಿನಲ್ಲಿ ಕೊಲೆಯತ್ನಕ್ಕೆ ಬಳಕೆ !
►41 ಲಕ್ಷ ಮೌಲ್ಯದ ಸೊತ್ತು, ಏರ್ ಗನ್, ಚಿನ್ನಾಭರಣ ವಶಕ್ಕೆ !
ಮಂಗಳೂರು : ನಗರದ ಮೂಡಬಿದಿರೆ, ಮುಲ್ಕಿ, ಬಜ್ಪೆ ಪ್ರದೇಶಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತೆ 6 ಮಂದಿಯನ್ನು ಬಂಧಿಸಲಾಗಿದೆ. ಈ ತಿಂಗಳ ಆದಿಯಲ್ಲಿ 9 ಮಂದಿಯನ್ನು ಬಂಧಿಸಲಾಗಿತ್ತು. ಈ ಕುರಿತು ಮಂಗಳೂರು ಕಮಿಷನರ್ ಶಶಿಕುಮಾರ್ ಅವರು ಮಾಹಿತಿ ಬಹಿರಂಗಪಡಿಸಿದ್ದಾರೆ.
ಈ ಆರು ಮಂದಿಯ ಬಂಧನದೊಂದಿಗೆ ಒಟ್ಟು 15 ಮಂದಿ ಆರೋಪಿಗಳ ಬಂಧನವಾದಂತಾಗಿದ್ದು, 28 ಪ್ರಕರಣಗಳಿಗೆ ಈ ಆರೋಪಿಗಳು ಸಂಬಂಧಿಸಿದ್ದಾರೆ ಎನ್ನಲಾಗಿದೆ. ಪ್ರಕರಣ ಪ್ರಮುಖ ಆರೋಪಿ ಸೇರಿದಂತೆ ಇನ್ನೂ ಹಲವರ ಬಂಧನವಾಗಬೇಕಿದೆ ಎಂದು ಕಮಿಷನರ್ ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ರಾಕೇಶ್, ಅರ್ಜುನ್, ಮೋಹನ್, ಮುಹಮ್ಮದ್ ಝುಬೈರ್, ಇಬ್ರಾಹಿಮ್ ಲತೀಫ್, ಮನ್ಸೂರ್ ಬೋಳಿಯಾರ್ ಎಂದು ಗುರುತಿಸಲಾಗಿದೆ.
ಬಂಧಿತರು ಹಾಸನದಲ್ಲಿ ಆಕ್ಸಿಸ್ ಬ್ಯಾಂಕ್ ದರೋಡೆಗೆ ಯತ್ನ ನಡೆಸಿದ್ದು, ವಿಫಲಗೊಂಡಿತ್ತು. ಅದೇ ರೀತಿ ಹಾಸನದ ಅರೆಹೊಳೆಯಲ್ಲಿ ಮನೆಯೊಂದರಲ್ಲಿ ಕಳ್ಳತನಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿದ್ದ ಪರವಾನಗಿ ಇರುವ ಪಿಸ್ತೂಲನ್ನು ಕದ್ದಿದ್ದರು. ಆ ಪಿಸ್ತೂಲನ್ನು ಇದೀಗ ಬಂಧಿತನಾಗಿರುವ ಮನ್ಸೂರ್ ಮಂಗಳೂರಿನ ಸಮೀರ್ ಎಂಬಾತನಿಗೆ ಮಾರಾಟ ಮಾಡಿದ್ದ. ಸಮೀರ್ ಅದನ್ನು ಇತ್ತಿಚೆಗೆ ಫಳ್ನೀರ್ ಬಳಿ ನಡೆದ ಗುಂಡು ಹಾರಾಟಕ್ಕೆ ಬಳಸಿ ಕೊಲೆಯತ್ನ ಪ್ರಕರಣದಲ್ಲಿ ಬಂಧಿತನಾಗಿದ್ದ ಎಂದು ಶಶಿಕುಮಾರ್ ಮಾಹಿತಿ ನೀಡಿದ್ದಾರೆ.