ಕಿಡಿಗೇಡಿಗಳಿಂದ ಧ್ವಂಸಗೊಂಡ ಸೈಯದ್ ಇಸಾಕರ ಗ್ರಂಥಾಲಯಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಗ್ರಂಥಗಳ ಹಸ್ತಾಂತರ

Prasthutha|

ಮೈಸೂರಿನ ಸೈಯದ್ ಇಸಾಕ್ ಅವರ ಪರಿಶ್ರಮದ ಗ್ರಂಥಾಲಯ ಕಿಡಿಗೇಡಿಗಳು ಬೆಂಕಿ ಹಚ್ಚಿ ನಾಶಪಡಿಸಿದ್ದು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಸೂಚನೆ ಮೇರೆಗೆ ಮೈಸೂರು ಜಿಲ್ಲಾಧ್ಯಕ್ಷರಾದ ಪ್ರವೀಣ್ ಕುಮಾರ್ ಇಂದು ಇಸಾಕ್ ಅವರನ್ನು ಜಿಲ್ಲಾ ಪದಾಧಿಕಾರಿಗಳೊಂದಿಗೆ ಭೇಟಿ ಮಾಡಿ ಗ್ರಂಥಾಲಯವನ್ನು ಕರವೇ ವತಿಯಿಂದ ಮತ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

- Advertisement -

ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಅವರಿಗೆ ಭಾರತ ಸಂವಿಧಾನ, ಭಗವದ್ಗೀತೆ, ಕುರ್‌ಆನ್ ಮತ್ತು ಬೈಬಲ್ ಪ್ರತಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾತಾಡಿದ ಇಸಾಕ್ ಗ್ರಂಥಾಲಯ ನಿರ್ಮಿಸುವುದು ನಮ್ಮ ಕರ್ತವ್ಯ. ನಾವು ಮೊತ್ತ ಮೊದಲು ಭಾರತೀಯರು ನಂತರ ನಾವು ಕನ್ನಡಿಗರು. ಕರ್ನಾಟಕ ಮೂಲೆ ಮೂಲೆಯಲ್ಲಿರುವ ಎಲ್ಲರೂ ಅಣ್ಣ ತಮ್ಮಂದಿರು. ಕನ್ನಡಕ್ಕೆ ಜಾತಿಯಿಲ್ಲ ಧರ್ಮ ಇಲ್ಲ ಎಂದಿದ್ದಾರೆ.

ಮಾತು ಮುಂದುವರೆಸಿದ ಅವರು ಕನ್ನಡ ನನ್ನ ರಕ್ತದಲ್ಲಿದೆ. ಕನ್ನಡ ನನ್ನನ್ನು ತಬ್ಬಿಕೊಂಡಿದೆ. ಇದು ಬೇರೆಯಾದರೆ ನಾನು ಸಹಿಸಲ್ಲ. ನನ್ನ ಅಂತ್ಯ ಸಂಸ್ಕಾರವನ್ನು ಕನ್ನಡದಲ್ಲೇ ಮಾಡಬೇಕೆಂದು ನಾನು ನನ್ನ ಕುಟುಂಬಿಕರಿಗೆ ಹೇಳಿದ್ದೇನೆ. ಕನ್ನಡಕ್ಕೆ ದ್ರೋಹ ಮಾಡಿದವರು ಯಾರೇ ಆಗಲಿ ನಾನು ಸಹಿಸುವುದಿಲ್ಲ. ನಾನು ಕಷ್ಟಪಟ್ಟು ಸ್ಥಾಪಿಸಿದ ಗ್ರಂಥಾಲಯವನ್ನು ಕಿಡಿಗೇಡಿಗಳು ನಾಶಪಡಿಸಿದ್ದಾರೆ. ನಾಶಪಡಿಸಿದವರು ಯಾರೇ ಆಗಲಿ ಅವರಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಸಯ್ಯದ್ ಅವರು ಕನ್ನಡದ ಮೇಲಿನ ಪ್ರೀತಿಯಿಂದಾಗಿ ಕಳೆದ ಹಲವು ವರ್ಷಗಳಿಂದ ಮೈಸೂರಿನ ರಾಜೀವ್‌ನಗರದಲ್ಲಿ ʻಕನ್ನಡ ಸಾರ್ವಜನಿಕ ಗ್ರಂಥಾಲಯʼ ನಡೆಸಿಕೊಂಡು ಬರುತ್ತಿದ್ದರು. ಅದನ್ನು ಸಹಿಸದ ಕೆಲವರು ಅದೆಷ್ಟೋ ಸಂದರ್ಭದಲ್ಲಿ ತಕರಾರು ತೆಗೆಯುತ್ತಿದ್ದರು ಎನ್ನಲಾಗಿದೆ. ಈಗ ಏಕಾಏಕಿ ಗ್ರಂಥಾಲಯಕ್ಕೆ ಬೆಂಕಿ ಇಟ್ಟು ಅಂದಾಜು 11 ಸಾವಿರ ಪುಸ್ತಕಗಳನ್ನು ನಾಶಪಡಿಸಿದ್ದಾರೆ.



Join Whatsapp