ಚೆನ್ನೈ: ತಮಿಳುನಾಡಿನ ತಿರುವಳ್ಳುವರ್ ಜಿಲ್ಲೆಯ ಕಾವರೈಪೇಟೈ ಸಮೀಪದಲ್ಲಿ ಮೈಸೂರು–ದರ್ಭಾಂಗ ಬಾಗ್ಮತಿ ಎಕ್ಸ್ಪ್ರೆಸ್ ರೈಲು ಅವಘಡಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ರಾತ್ರಿ ಮೈಸೂರು-ದರ್ಭಾಂಗ ಬಾಗ್ಮತಿ ಎಕ್ಸ್ಪ್ರೆಸ್, ಗೂಡ್ಸ್ ರೈಲಿಗೆ ಡಿಕ್ಕಿಯಾಗಿ ಸುಮಾರು 19 ಮಂದಿ ಗಾಯಗೊಂಡಿದ್ದರು. 12ರಿಂದ 13 ಬೋಗಿಗಳು ಹಳಿ ತಪ್ಪಿದ್ದವು.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ‘ಈ ಅವಘಡವು ಒಡಿಶಾದ ಬಾಲೇಶ್ವರದಲ್ಲಿ ನಡೆದ ದುರ್ಘಟನೆಯನ್ನು ನೆನಪಿಸುವಂತಿದೆ’ ಎಂದು ಹೇಳಿದ್ದಾರೆ.
‘ಹಲವು ಅಪಘಾತಗಳಲ್ಲಿ ಅನೇಕ ಜೀವಗಳನ್ನು ಕಳೆದುಕೊಂಡರೂ ಯಾವುದೇ ಪಾಠ ಕಲಿತಂತಿಲ್ಲ. ಇದಕ್ಕೆ ಉನ್ನತ ಮಟ್ಟದಿಂದಲೇ ಹೊಣೆಗಾರರಾಗುತ್ತಾರೆ. ಸರ್ಕಾರ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಕುಟುಂಬಗಳು ಬಲಿಯಾಗಬೇಕು’ ಎಂದು ಪ್ರಶ್ನೆ ಮಾಡಿದ್ದಾರೆ.
ಕಳೆದ ವರ್ಷ ಒಡಿಶಾದ ಬಾಲೇಶ್ವರದಲ್ಲಿ ಎರಡು ಪ್ರಯಾಣಿಕ ರೈಲುಗಳು ಮತ್ತು ಸರಕು ಸಾಗಣೆ ರೈಲು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 293 ಮಂದಿ ಮೃತಪಟ್ಟಿದ್ದರು. ಘಟನೆಯಲ್ಲಿ 1,200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.