ಸಾರಿಗೆ ನೌಕರರ ಮುಷ್ಕರ | ಪರ್ಯಾಯ ಸಾರಿಗೆ ವ್ಯವಸ್ಥೆ ಪ್ರಕಟಿಸಿದ ಡಿಸಿಎಂ ಲಕ್ಷ್ಮಣ ಸವದಿ

Prasthutha|

ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ ಈಗಾಗಲೇ 8 ಬೇಡಿಕೆಗಳನ್ನು ಈಡೇರಿಸಿದ್ದರೂ ಸಹ ಇಂದಿನಿಂದ ರಾಜ್ಯಾದ್ಯಂತ ಸಾರಿಗೆ ನಿಗಮಗಳ ಬಸ್ ಸಂಚಾರವನ್ನು ಸ್ಥಗಿತಗೊಳಿಸುವ ಮೂಲಕ ಮುಷ್ಕರ ಪ್ರಾರಂಭಿಸಿರುವುದು ಮತ್ತು ನಾಳೆಯೂ ಮುಷ್ಕರ ಮುಂದುವರೆಸುವ ನಿರ್ಧಾರವನ್ನು ಸಾರಿಗೆ ನೌಕರರ ಒಕ್ಕೂಟದ ಮುಖಂಡರು ಕೈಗೊಂಡಿರುವುದು ನಿಜಕ್ಕೂ ದುರ್ದೈವದ ವಿಚಾರವಾಗಿದೆ.  ಆದರೆ ಮುಷ್ಕರದಿಂದ ತೊಂದರೆಯಾಗಬಾರದು ಎಂಬ ಹಿತದೃಷ್ಟಿಯಿಂದ ಸರ್ಕಾರವು ಹಲವು ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಂಡಿರುವುದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಮನವಿ ಮಾಡಿಕೊಂಡಿದ್ದಾರೆ.

- Advertisement -

ಈಗಾಗಲೇ ತಿಳಿಸಿರುವಂತೆ ಸಾರಿಗೆ ನೌಕರರ ವೇತನ ಹೆಚ್ಚಳಕ್ಕಾಗಿ ಚುನಾವಣಾ ಆಯೋಗದ ಅನುಮತಿಗಾಗಿ ಮನವಿ ಮಾಡಿಕೊಳ್ಳಲಾಗಿದೆ.  ಒಂದು ವೇಳೆ ಚುನಾವಣಾ ಆಯೋಗವು ಈ ಬಗ್ಗೆ ಅನುಮತಿ ನೀಡಿದಲ್ಲಿ ಈ ಬಗ್ಗೆ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸವದಿ ಅವರು ಸ್ಪಷ್ಟಪಡಿಸಿದರು.

ಕೆಲವರ ಚಿತಾವಣೆಯಿಂದ ಈ ಮುಷ್ಕರ ಪ್ರಾರಂಭವಾಗಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೆಳಗಿನ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

- Advertisement -

1) ಈಗಾಗಲೇ ಕೋವಿಡ್ ಸಮಯದಲ್ಲಿ ಸರೆಂಡರ್ ಮಾಡಿದ ಖಾಸಗಿ ನೊಂದಾಯಿತ ಪ್ರಯಾಣಿಕ ವರ್ಗದ ವಾಹನಗಳಿಗೆ ಏಪ್ರಿಲ್ ತಿಂಗಳಿಗೆ ಅನ್ವಯಿಸುವಂತೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ. (ಆದೇಶ ಸಂಖ್ಯೆ:ಟಿಡಿ01ಟಿಡಿಆರ್2021, ದಿನಾಂಕ: 06.04.2021).

2) ಈ ಮುಷ್ಕರದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಂಟಾಗುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಖಾಸಗಿ ವಾಹನಗಳ ಮುಖಾಂತರ ಪರ್ಯಾಯ ಕಲ್ಪಿಸುವ ಸಂಬಂಧ ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 66(3)(ಎಫ್)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮುಷ್ಕರದ ಅವಧಿಯಲ್ಲಿ ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಒದಗಿಸುವ ಸಾರಿಗೆ ಪ್ರಯಾಣಿಕರ ವಾಹನಗಳಿಗೆ ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 66(1)ರಂತೆ ಅಗತ್ಯವಿರುವ ರಹದಾರಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ. (ಆದೇಶ ಸಂಖ್ಯೆ:ಟಿಡಿ107ಟಿಡಿಒ 2021, ದಿನಾಂಕ: 07.04.2021).

• ಇಡೀ ರಾಜ್ಯದಲ್ಲಿ ಖಾಸಗಿ ಟ್ಯಾಕ್ಸಿ, ಮಿನಿ ಬಸ್, ಬಸ್ಸುಗಳ ಮಾಲೀಕರ ಸಂಘದೊಂದಿಗೆ ಈಗಾಗಲೇ ಚರ್ಚಿಸಲಾಗಿದ್ದು, ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಒದಗಿಸುವಂತೆ ಕೋರಲಾಗಿದೆ. 

• ಸಾರಿಗೆ ನಿಗಮಗಳ ಬಸ್ ನಿಲ್ದಾಣ ಮತ್ತು ಘಟಕಗಳಲ್ಲಿ ಈ ಖಾಸಗಿ ಬಸ್ಸುಗಳ ನಿಲುಗಡೆಗಾಗಿ ಸ್ಥಳವಕಾಶವನ್ನು ಮತ್ತು ನಿಲ್ದಾಣದಿಂದ ಕಾರ್ಯಾಚರಣೆ ಮಾಡಲು ಅವಕಾಶ ಒದಗಿಸಲಾಗಿದೆ. (ಆದೇಶ ಸಂ.ಕರಾಸಾ/ಕೇಕ/ಸಂ/ಸಾ/ಜಿ-2/81/21-22 ದಿನಾಂಕ: 06.04.2021)

• ದೂರದ ಸ್ಥಳಗಳಿಗೆ ತೆರಳಲಿರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶಗಳಿಂದ ಬೆಂಗಳೂರಿನಿಂದ ಬೆಳಗಾವಿ, ಕಲಬುರಗಿ, ಬೀದರ್, ಕಾರವಾರ, ವಿಜಯಪುರ, ಶಿವಮೊಗ್ಗ, ಮೈಸೂರು ಮುಂತಾದ ಕಡೆಗಳಿಗೆ ಹೆಚ್ಚಿನ ರೈಲು ಸಂಪರ್ಕವನ್ನು ಒದಗಿಸುವಂತೆ ಈಗಾಗಲೇ ರೈಲ್ವೆ ಇಲಾಖೆಯನ್ನು ಸಹ ಕೋರಲಾಗಿದೆ.

• ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ರೈಲುಗಳನ್ನು ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.

ಈ ಎಲ್ಲಾ ಪರ್ಯಾಯ ವ್ಯವಸ್ಥೆ ಮಾಡಿರುವುದರಿಂದ ಸಾರ್ವಜನಿಕರು ಇಂತಹ ಸಂಕಷ್ಟದ ಸಮಯದಲ್ಲಿ ಸಹಕರಿಸಬೇಕೆಂದು ಕೋರಲಾಗಿದೆ. ನಮ್ಮ ಸಾರಿಗೆ ನಿಗಮಗಳ ನೌಕರರು ಮುಷ್ಕರವನ್ನು ಕೈಬಿಟ್ಟು ಸರ್ಕಾರದೊಂದಿಗೆ ಸಹಕರಿಸಬೇಕೆಂದು ಸಾರಿಗೆ ಸಚಿವರೂ ಆಗಿರುವ ಸವದಿ ಅವರು ಸರ್ಕಾರದ ಪರವಾಗಿ ಮತ್ತೊಮ್ಮೆ ವಿನಂತಿಸಿಕೊಂಡಿರುತ್ತಾರೆ.



Join Whatsapp