ಗಾಝಿಯಾಬಾದ್: ಕೇಂದ್ರ ಸರಕಾರದ ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಸಾವನ್ನಪ್ಪಿದ ರೈತರ ಸ್ಮರಣಾರ್ಥ ಪ್ರತಿಭಟನಾ ಸ್ಥಳ ‘ಗಾಝಿಪುರ-ಗಾಝಿಯಾಬಾದ್(ಉತ್ತರ ಪ್ರದೇಶದ ಗಡಿ)ಗಡಿಯಲ್ಲಿ ‘ಹುತಾತ್ಮ ಸ್ಮಾರಕ’ ನಿರ್ಮಾಣಕ್ಕೆ ಭಾರತೀಯ ಕಿಸಾನ್ ಒಕ್ಕೂಟ(ಬಿಕೆಯು) ಮುಖಂಡ ರಾಕೇಶ್ ಸಿಂಗ್ ಟಿಕಾಯತ್, ಸಾಮಾಜಿಕ ಹೋರಾಟಗಾರ್ತಿ ಮೇಧಾಪಾಟ್ಕರ್ ಅವರು ಅಡಿಗಲ್ಲು ಹಾಕಿದ್ದಾರೆ.
ಮುಂದೆ ಇಲ್ಲಿ ಶಾಶ್ವತವಾದ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ಬಿಕೆಯು ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ 320 ರೈತರು ಸಾವನ್ನಪ್ಪಿದ್ದಾರೆ. ‘ಹುತಾತ್ಮರ ಸ್ಮಾರಕ’ ನಿರ್ಮಾಣಕ್ಕಾಗಿ ಎಲ್ಲ ಮೃತ ರೈತರ ಹಳ್ಳಿಗಳಿಂದ ಮಣ್ಣನ್ನು ಸಂಗ್ರಹಿಸಿ ಪ್ರತಿಭಟನಾ ಸ್ಥಳಕ್ಕೆ ತರಲಾಗಿದೆ ಎಂದು ಬಿಕೆಯು ತಿಳಿಸಿದೆ.
‘ಮಿಟ್ಟಿ ಸತ್ಯಾಗ್ರಹದ (ಮಣ್ಣಿನ ಸತ್ಯಾಗ್ರಹ)’ ಹೆಸರಲ್ಲಿ ವಿವಿಧ ರಾಜ್ಯಗಳಿಂದ ಮಣ್ಣನ್ನು ಸಂಗ್ರಹಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖ್ ದೇವ್ ರಾಜಗುರು, ಚಂದ್ರಶೇಖರ್ ಆಝಾದ್, ರಾಮ್ ಪ್ರಸಾದ್ ಮತ್ತು ಅಶ್ಫಾಕುಲ್ಲಾ ಖಾನ್ ಜನಿಸಿದ ಸ್ಥಳದಿಂದ ಮಣ್ಣನ್ನು ಸಂಗ್ರಹಿಸಿ ತರಲಾಗಿದೆ.