►ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ
ಮಂಗಳೂರು : ನಗರದಲ್ಲಿ ಚೈಲ್ಡ್ ಕೇರ್ ಸಂಸ್ಥೆಗಳ ಹೆಸರಿನಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಗಳು ವರದಿಯಾಗಿದೆ. ಪೊಲೀಸರು ನಡೆಸಿದ ರಹಸ್ಯ ಕಾರ್ಯಾಗಾರದಲ್ಲಿ ಮಕ್ಕಳು ಈ ಕುರಿತು ಬಾಯಿ ಬಿಟ್ಟಿದ್ದಾರೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಒಟ್ಟು 6 ಸಂಸ್ಥೆಗಳಲ್ಲಿ ಈ ರೀತಿಯ ಪ್ರಕರಣಗಳು ವರದಿಯಾಗಿದೆ ಎನ್ನಲಾಗಿದ್ದು, 20 ಪ್ರಕರಣಗಳು ಬೆಳಕಿಗೆ ಬಂದಿದೆ. ಪೊಲೀಸ್ ಕಾರ್ಯಾಗಾರದಲ್ಲಿ ಒಟ್ಟು 450 ಮಕ್ಕಳು ಭಾಗಿಯಾಗಿದ್ದರು ಎಂದು ಕಮಿಷನರ್ ಅವರು ಮಾಹಿತಿ ನೀಡಿದ್ದಾರೆ.
ಮಂಗಳೂರಿನ ಹೊರವಲಯದ ಕುಂಪಳದಲ್ಲಿರುವ ನೂರಾನಿಯ ಯತೀಂ ಖಾನಾ ದಾರೂಲ್ ಮಸಾಕಿನ್ ಚೈಲ್ಡ್ ಕೇರ್ ಮತ್ತು ಅನಾಥಾಲಯ ಕೇರ್ ಟೇಕರ್ ನಿಂದ ಕಿರುಕುಳ ಅನುಭವಿಸಿದ್ದಾಗಿ 14 ವರ್ಷದ ಬಾಲಕ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಕೇರ್ ಟೇಕರ್ ನನ್ನು ಅಯ್ಯೂಬ್ (52) ಎಂದು ಗುರುತಿಸಲಾಗಿದೆ.
ಅದೇ ರೀತಿ ಒಂದೇ ಸಂಸ್ಥೆಯ ನಾಲ್ಕು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಡೆದಿರುವ ಮಾಹಿತಿ ಕೂಡಾ ಲಭ್ಯವಾಗಿದೆ. ಮಾರ್ಚ್ 28 ರಂದು ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿ ವಿವಿಧ ಸಂಸ್ಥೆ ಮತ್ತು ಚೈಲ್ಡ್ ವೆಲ್ಪೇರ್ ಕಮಿಟಿಗಳು ಪೊಲೀಸರ ಜೊತೆ ಸೇರಿಕೊಂಡು ಕಾರ್ಯಾಗಾರ ನಡೆಸಿದ್ದರು. ನಗರ ಅನಾಥಲಯ ಮತ್ತು ಮಕ್ಕಳ ಪಾಲನಾ ಕೇಂದ್ರದ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಾಗಾರದಲ್ಲಿ ಮಕ್ಕಳಿಂದ ಲೈಂಗಿಕ ಕಿರುಕುಳದ ಮಾಹಿತಿಗಳನ್ನು ಪೊಲೀಸರು ಪಡೆದಿದ್ದರು. ಈ ಕುರಿತು ಮಂಗಳೂರು ಕಮಿಷನರ್ ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.