ಇಂದು ವಿಚಾರಣೆಗೆ ಹಾಜರಾಗಬೇಕಿದ್ದ ಜಾರಕಿಹೊಳಿ; ಸಂತ್ರಸ್ತೆಯ ಹೇಳಿಕೆಗೆ ಪುಷ್ಟಿ
ಬೆಂಗಳೂರು: ರಾಜ್ಯ ರಾಜಕೀಯಧ ಬಹು ಚರ್ಚೆಯ ವಿಷಯವಾಗಿರುವ ಸಿಡಿ ಪ್ರಕರಣದ ಆರೋಪಿ, ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿಗೆ ಕರೋನ ಪಾಸಿಟಿವ್ ಬಂದಿದೆ ಎಂದು ಶಾಸಕ ಭೈರತಿ ಬಸವರಾಜ್ ಹೇಳಿಕೆ ನೀಡಿದ್ದಾರೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಮೇಶ್ ಜಾರಕಿಹೊಳಿ SIT ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕಾಗಿತ್ತು. ಇತ್ತೀಚಿಗೆ ಜ್ವರದ ನೆಪ ಹೇಳಿ ತನಿಖೆಯನ್ನು ಮುಂದೂಡಲು ಯಶಸ್ವಿಯಾಗಿದ್ದರು. ಮುಂದೂಡಿದ ದಿನ ಸೋಮವಾರಕ್ಕೆ ನಿಗದಿಯಾಗಿತ್ತು. ಅದೇ ರೀತಿ ಇಂದು ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಬೇಕಾಗಿತ್ತು. ಆದರೆ ಸದ್ಯ ಕರೋನ ಪಾಸಿಟಿವ್ ಬಂದಿರುವುದು ಸದ್ಯ ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.
ಇಂದು (ಸೋಮವಾರ) ವಿಚಾರಣೆಗೆ ಹಾಜರಾಗುವುದಕ್ಕಿಂತ ಮುನ್ನ ‘ಪಾಸಿಟಿವ್’ ಸುದ್ದಿ ಬಂದಿದೆ. ಬೆಳಗಾವಿಯಲ್ಲಿ ಈ ಬಗ್ಗೆ ಭೈರತಿ ಬಸವರಾಜ್ ಹೇಳಿಕೆ ನೀಡಿದ್ದಾರೆ. ಸದ್ಯ ಸಾಕಷ್ಟು ಅನುಮಾನಕ್ಕೂ ಈ “ಪಾಸಿಟಿವ್” ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಾದ್ಯಂತ ವಿವಿಧ ರೀತಿಯ ಬರಹಗಳು ಕಾಣಿಸಿಕೊಂಡಿದೆ. ಹಲವು ಬರಹಗಳು ಹಾಸ್ಯದಿಂದ ಕೂಡಿದ್ದರೂ ಸಾಕಷ್ಟು ಅನುಮಾನವನ್ನು ವ್ಯಕ್ತಪಡಿಸುವಂತಿದೆ. ಪ್ರಕರಣದ ಮೊದಲಿನಿಂದಲೂ ಅನುಮಾನ ವ್ಯಕ್ತಪಡಿಸಿದ ಸಂತ್ರಸ್ತೆ ಯುವತಿ ಮತ್ತು ಯುವತಿ ಪರ ನ್ಯಾಯವಾದಿ ಹೇಳಿಕೆಗಳಿಗೆ ಪುಷ್ಟಿ ನೀಡಿದಂತಾಗಿದೆ ಈ “ಪಾಸಿಟಿವ್” ಟ್ವಿಸ್ಟ್.