ಹೊಸದಿಲ್ಲಿ : ಪೌರತ್ವ ಪಟ್ಟಿಯಿಂದ ವಂಚಿತರಾದ ಬಂಗಾಳಿ ಹಿಂದೂಗಳು ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸ್ಸಾಂನ 19 ಲಕ್ಷ ಜನರು ಎನ್ಆರ್ಸಿ ಪಟ್ಟಿಯಿಂದ ಹೊರಗಡೆ ಇದ್ದಾರೆ. ಇವರಲ್ಲಿ ಹೆಚ್ಚಿನವರು ಬಂಗಾಳಿ ಹಿಂದೂಗಳು ಮತ್ತು ಅಸ್ಸಾಂನ ಬುಡಕಟ್ಟು ಜನಾಂಗದವರಾಗಿದ್ದಾರೆ. ಇದರಿಂದಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎನ್ಆರ್ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ತೀವ್ರ ಚರ್ಚೆಯಾಗುತ್ತಿದೆ.
ಎನ್ಆರ್ಸಿಗೆ ಅಗತ್ಯವಾದ ದಾಖಲೆಗಳನ್ನು ಸಹ ಒದಗಿಸಲು ಸಾಧ್ಯವಿಲ್ಲದ ಬಡ ಸಮುದಾಯವಾಗಿದೆ ಬುಡಕಟ್ಟು ಸಮುದಾಯ. ಎನ್ಆರ್ಸಿಯಿಂದ ವಂಚಿತರಾದ ಅಸ್ಸಾಮಿನ ಜನರು ಬಿಜೆಪಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ‘ಸರ್ಕಾರ ನಮಗೆ ದ್ರೋಹ ಮಾಡಿದೆ. ನಮಗೆ ಬೇರೆ ದಾರಿ ಇಲ್ಲದಾಗಿದೆ’ ಎಂದು ಎನ್ಆರ್ಸಿಯಿಂದ ವಂಚಿತರಾದ ಕುಟುಂಬವೊಂದು ಸುದ್ದಿಗಾರರಿಗೆ ತಿಳಿಸಿದೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014 ರ ಡಿಸೆಂಬರ್ 31 ರ ಮೊದಲು ಭಾರತಕ್ಕೆ ಬಂದ ಹಿಂದೂಗಳು, ಸಿಖ್ಖರು, ಪಾರ್ಸಿಗಳು, ಜೈನರು, ಬೌದ್ಧರು ಮತ್ತು ಕ್ರಿಶ್ಚಿಯನ್ನರಿಗೆ ಸಿಎಎ ಪೌರತ್ವ ನೀಡುತ್ತದೆ. ಮುಸ್ಲಿಮರನ್ನು ಈ ಕಾನೂನಿನಿಂದ ಹೊರಗಿಟ್ಟಿರುವುದರ ವಿರುದ್ಧ ದೇಶದಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು.