ಬೆಂಗಳೂರು: ವಕ್ಫ್ ಕಾಯಿದೆಗೆ ತಿದ್ದುಪಡಿ ತರಲು ಹೊರಟ ಕೇಂದ್ರ ಸರ್ಕಾರದ ಕ್ರಮ ದುರುದ್ದೇಶಪೂರಿತ ಹೆಜ್ಜೆಯಾಗಿದೆ. ಇದು ಸಂವಿಧಾನವನ್ನು ನಾಶಮಾಡಲು ಇಟ್ಟ ಇನ್ನೊಂದು ಹೆಜ್ಜೆಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ರಾಷ್ಟ್ರಾಧ್ಯಕ್ಷ ಎಂಕೆ ಫೈಝಿ ಹೇಳಿದ್ದಾರೆ.
ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ಸಂವಿಧಾನದ ಪರಿಚ್ಛೇದ 25 – 28 ರ ಅಡಿಯಲ್ಲಿ ಖಾತ್ರಿಪಡಿಸಲಾದ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ನಿರಾಕರಣೆ ಮತ್ತು ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳೆಂದು ಬದಿಗಿಟ್ಟು ಅವರನ್ನು ಗುಲಾಮರನ್ನಾಗಿ ಮಾಡುವ ಯೋಜನೆಯಾಗಿದೆ. ಒಂದು ದಶಕದ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಯಗತಗೊಳಿಸುತ್ತಿರುವ ಕ್ರಮಗಳು ಆರೆಸ್ಸೆಸ್‌ನ ಗೋಳ್ವಾಲ್ಕರ್ ಅವರ ಮುಸ್ಲಿಮರನ್ನು ನಿರ್ಲಕ್ಷಿಸುವ ಕೋಮುವಾದಿ ಕಾರ್ಯಸೂಚಿಯ ಭಾಗವಾಗಿದೆ ಒಂದೆಡೆ ಅಕ್ರಮ ಒತ್ತುವರಿಯಾಗಿದೆ ಎಂದು ಆರೋಪಿಸಿ ಮುಸಲ್ಮಾನರ ಆರಾಧನಾ ಸ್ಥಳಗಳನ್ನು ಕೆಡವಲಾಗುತ್ತಿದೆ. ಇನ್ನೊಂದೆಡೆ ಮಸೀದಿಗಳ ಕೆಳಗೆ ವಿಗ್ರಹಗಳು ಪತ್ತೆಯಾಗಿವೆ ಎಂದು ಹೇಳಿಕೊಂಡು ವಶಪಡಿಸಿಕೊಂಡು ದೇವಸ್ಥಾನಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಮತ್ತೊಂದೆಡೆ ಮುಸ್ಲಿಮ್ ಸಮುದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಕಾನೂನುಗಳ ಜಾರಿ ಮಾಡಲಾಗುತ್ತಿದೆ. ಬಿಜೆಪಿ ಆಡಳಿತದಲ್ಲಿರುವ ಕೇಂದ್ರ ಮತ್ತು ರಾಜ್ಯಗಳ ಸರ್ಕಾರದ ಪ್ರಮುಖ ಚಟುವಟಿಕೆಗಳು ಮುಸ್ಲಿಮರಿಗೆ ಕಿರುಕುಳ ನೀಡುವುದರ ಮೇಲೆ ಕೇಂದ್ರೀಕೃತವಾಗಿವೆ ಎಂದು ಅವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಕ್ಫ್ ಆಸ್ತಿಗಳು ಸಾರ್ವಜನಿಕ ಆಸ್ತಿಗಳಲ್ಲ, ಅವು ಮಸೀದಿಗಳು, ಮದರಸಗಳು, ದತ್ತಿ ಮತ್ತು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಮುಂತಾದ ವಿವಿಧ ಧಾರ್ಮಿಕ ಉದ್ದೇಶಗಳಿಗಾಗಿ ನಿಷ್ಠಾವಂತ ಮುಸ್ಲಿಮರು ದಾನ ಮಾಡಿದ ಆಸ್ತಿಗಳು. ವಕ್ಫ್ ಬೋರ್ಡ್ ಮತ್ತು ವಕ್ಫ್ ಆಸ್ತಿಗಳ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಯಂತ್ರಿಸಲು ವಕ್ಫ್ ಕಾಯಿದೆ ಈಗಾಗಲೇ ಜಾರಿಯಲ್ಲಿದೆ. ಮತ್ತೆ ಈ ಕಾಯಿದೆಗೆ ತಿದ್ದುಪಡಿ ಮಾಡುವ ಕೇಂದ್ರ ಸರಕಾರದ ಕ್ರಮವು ಸಂವಿಧಾನ ವಿರೋಧಿ ಮತ್ತು ನಿರಂಕುಶವಾಗಿದೆ. ದೇಶದ ನಾನಾ ಭಾಗಗಳಲ್ಲಿ ರಾಜಕೀಯ ಪ್ರಭಾವ ಹೊಂದಿರುವ ಶ್ರೀಮಂತರು ಅಪಾರ ಪ್ರಮಾಣದ ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದ್ದು, ವಕ್ಫ್ ಆಸ್ತಿ ಬಳಕೆಗೆ ಅನಗತ್ಯ ಕಡಿವಾಣ ಹಾಕುವ ಬದಲು, ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ವಕ್ಫ್ ಆಸ್ತಿಗಳನ್ನು ವಾಪಸ್ ಪಡೆಯಲು ಸರಕಾರ ಕ್ರಮಕೈಗೊಳ್ಳುವ ಬದಲು ದುರುದ್ದೇಶದ ಕ್ರಮ ಕೈಗೊಳ್ಳಬಾರದು. ಕೇಂದ್ರ ಸರ್ಕಾರದ ಕೋಮುವಾದಿ ಅಜೆಂಡಾದ ವಿರುದ್ಧ SDPI ಬಲವಾಗಿ ಪ್ರತಿಭಟಿಸುತ್ತದೆ. ಸರ್ಕಾರವು ಈ ಸಂವಿಧಾನ ವಿರೋಧಿ ಕ್ರಮದಿಂದ ಹಿಂದೆ ಸರಿಯಬೇಕು ಮತ್ತು ಸಂವಿಧಾನದ ಹಕ್ಕುಗಳನ್ನು ತಾರತಮ್ಯವಿಲ್ಲದೆ ದೇಶದ ಎಲ್ಲಾ ನಾಗರಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸುತ್ತದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ.