ಮರು ನಾಮಕರಣದ ಹೆಸರಿನಲ್ಲಿ ಪಂಗನಾಮ

0
508

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದ ಬಳಿ ಹೇಳಿಕೊಳ್ಳುವಂತಹ ಸಾಧನೆಗಳೇನೂ ಇಲ್ಲ. ಮತ್ತೆ ಅದು ಹಿಂದುತ್ವವನ್ನು ಮುಂದೆ ಮಾಡಿಕೊಂಡು 2019ರ ಲೋಕಸಭಾ ಚುನಾವಣೆ ತಯಾರಿ ನಡೆಸಲು ಕಸರತ್ತು ನಡೆಸುತ್ತಿದೆ. ನಾಲ್ಕುವರೆ ವರ್ಷಗಳ ಆಡಳಿತಾವಧಿಯಲ್ಲಿ ಮರೆತು ಹೋಗಿದ್ದ ರಾಮ ಮಂದಿರ ಪುನಃ ನೆನಪಾಗಿದೆ. ಪ್ರತಿಮೆ ನಿರ್ಮಾಣದ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆಯ ಸಾವಿರಾರು ಕೋಟಿ ರೂಪಾಯಿಯನ್ನು ಪೋಲು ಮಾಡಲಾಗುತ್ತಿದೆ. ಇದೀಗ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಊರುಗಳ ಹೆಸರುಗಳನ್ನು ಬದಲಾವಣೆ ಮಾಡುವ ಅಭಿಯಾನವೂ ಚುನಾವಣೆ ಪೂರ್ವ ತಯಾರಿಯ ಭಾಗವೇ ಆಗಿದೆ.

ಹೆಸರು ಬದಲಾವಣೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯವೆಂದರೆ, ಉತ್ತರ ಪ್ರದೇಶ. ಕಟ್ಟರ್ ಹಿಂದುತ್ವವಾದಿಯಾಗಿರುವ ಯೋಗಿ ಆದಿತ್ಯನಾಥ್ ಯುಪಿಯಲ್ಲಿ ಆಡಳಿತಕ್ಕೇರಿದ ಬಳಿಕ ಜನಪರವಾದ ಆಡಳಿತ ನಡೆಸುವ ಬದಲು ಧರ್ಮದ ಆಧಾರದಲ್ಲಿ ಜನರನ್ನು ಎತ್ತಿಕಟ್ಟುತ್ತಾ ದ್ವೇಷದ ವಾತಾವರಣವನ್ನು ಸಷ್ಟಿಸುತ್ತಿದ್ದಾರೆ. ಒಂದೆಡೆ ಯುಪಿಯಲ್ಲಿ ಕುಂಭಮೇಳಕ್ಕೆ 5000 ಕೋಟಿ ಖರ್ಚು ಮಾಡಲಿದೆ ಎಂಬ ವಿಚಾರ ಚರ್ಚೆಯಲ್ಲಿದೆ. ಅದೇ ರಾಜ್ಯದಲ್ಲಿ ನವಜಾತ ಶಿಶುಗಳು ಆಸ್ಪತ್ರೆ ಸೂಕ್ತ ಸೌಕರ್ಯಗಳಿಲ್ಲದೆ ಪ್ರಾಣ ಬಿಡುತ್ತಿವೆ ಮತ್ತು ಜನರ ಮೂಲಭೂತ ಸೌಕರ್ಯಗಳ ವ್ಯವಸ್ಥೆ ತೀರಾ ಕಳಪೆಮಟ್ಟದಲ್ಲಿದೆ. ಹೆಸರು ಬದಲಾವಣೆಯ ಅಭಿಯಾನದಲ್ಲಿ ತೊಡಗಿರುವ ಯೋಗಿಯವರ ಅಂತರಾಳದಲ್ಲಿರುವುದು ಜನರ ನಡುವೆ ಕೋಮುವಾದದ ವಿಷಬೀಜವನ್ನು ಬಿತ್ತುವ ಉದ್ದೇಶ ಮಾತ್ರವಾಗಿದೆ. ಕೇವಲ ಜಿಲ್ಲೆ, ಊರು, ನಿಲ್ದಾಣ, ಸ್ಮಾರಕಗಳ ಹೆಸರು ಬದಲಾವಣೆಯಿಂದ ರಾಜ್ಯದ ಅಭಿವದ್ಧಿ ಸಾಧ್ಯವಿಲ್ಲ ಎಂಬುದನ್ನು ಅವರು ಮೊದಲಾಗಿ ಅರ್ಥಮಾಡಿಕೊಳ್ಳಬೇಕು. ಕೇವಲ ಹಿಂದುತ್ವಕ್ಕೆ ಅಂಟಿಕೊಂಡಿರುವ ಯೋಗಿ ಸರಕಾರವು ನಿರುದ್ಯೋಗ, ಆರೋಗ್ಯ ಸಮಸ್ಯೆ, ಹದಗೆಟ್ಟ ಕಾನೂನು ಸುವ್ಯವಸ್ಥೆಯನ್ನು ಸುಧಾರಿಸಲು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಬಹುಶಃ ಹೆಸರು ಬದಲಾವಣೆಯೇ ಯೋಗಿ ಆಡಳಿತದ ಪ್ರಮುಖ ಸಾಧನೆಯಾಗಿ ಗುರುತಿಸಿಕೊಂಡರೂ ಅಚ್ಚರಿಯಿಲ್ಲ.

ಶಿವಸೇನಾ ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ರಾಮನ ಪ್ರತಿಮೆಯನ್ನು ನಿರ್ಮಿಸುವ ಯೋಗಿ ಆದಿತ್ಯನಾಥ್‌ರ ಘೋಷಣೆಯನ್ನು ತೀವ್ರವಾಗಿ ಟೀಕಿಸಿದೆ. ಸರಕಾರವು ಎಲ್ಲಾ ರಂಗಗಳಲ್ಲೂ ವೈಫಲ್ಯ ಕಂಡಿದ್ದು, ಇದಕ್ಕಾಗಿ ಜನರನ್ನು ದಾರಿತಪ್ಪಿಸಲು ಆಯೋಧ್ಯೆ ಕಾರ್ಡ್ ಅನ್ನು ಆಡುತ್ತಿದೆ ಮತ್ತು ಯುಪಿಯ ನಗರಗಳ ಪುನರ್ ನಾಮಕರಣವು ಮುಖ್ಯಮಂತ್ರಿ ಯೋಗಿಯಿಂದ ಮುಂಬರುವ ಚುನಾವಣೆಗೂ ಮೊದಲು ಮತದಾರರನ್ನು ಓಲೈಸುವ ಲಾಲಿಪಾಪ್ ಆಗಿದೆ ಎಂದು ಪಕ್ಷವು ಹೇಳಿದೆ.

ಯುಪಿಯ ಮೊಗಲ್‌ಸರಾಯ್ ರೈಲ್ವೇ ನಿಲ್ದಾಣಕ್ಕೆ ಮತ್ತು ಆಗ್ರಾದ ವಿಮಾನ ನಿಲ್ದಾಣಕ್ಕೆ ಆರೆಸ್ಸೆಸ್ ಚಿಂತಕ ದೀನ್ ದಯಾಳ್ ಉಪಾಧ್ಯಾಯರ ಹೆಸರಿಗೆ ಈ ಹಿಂದೆಯೇ ಬದಲಿಸಲಾಗಿದೆ. ಗೋರಖ್‌ಪುರ ಪಟ್ಟಣದ ಮಿಯಾ ಬಝಾರ್ ಅನ್ನು ಮಾಯಾ ಬಝಾರ್, ಉರ್ದು ಬಝಾರ್ ಅನ್ನು ಹಿಂದಿ ಬಝಾರ್, ಅಲಿ ನಗರ್ ಅನ್ನು ಆರ್ಯನಗರ್, ಇಸ್ಲಾಮ್‌ಪುರ್ ಅನ್ನು ಈಶ್ವರ್‌ಪುರ್, ಹುಮಾಯೂನ್ ನಗರ್ ಅನ್ನು ಹನುಮಾನ್ ನಗರ್ ಎಂಬುದಾಗಿ ಮರು ನಾಮಕರಣ ಮಾಡಲಾಗಿದೆ. ಇದೀಗ ಅಲಹಾಬಾದ್ ಹೆಸರು ಬದಲಿಸಿ ಪ್ರಯಾಗ್‌ರಾಜ್ ಮಾಡುವ ಪ್ರಸ್ತಾಪಕ್ಕೂ ಒಪ್ಪಿಗೆ ನೀಡಿದೆ. ಫೈಝಾಬಾದ್‌ನ್ನು ಅಯೋಧ್ಯೆಯನ್ನಾಗಿ ನಾಮಕರಣ ಮಾಡುವುದಾಗಿ ಯೋಗಿ ಹೇಳಿದ್ದಾರೆ. ಆಗ್ರಾದ ಹೆಸರನ್ನು ಬದಲಿಸಿ ಅಗ್ರವಾಲ್ ಅಥವಾ ಅಗ್ರಾವನ್ ಮತ್ತು ಮುಝಪ್ಫರ್‌ನಗರದ ಹೆಸರನ್ನು ಬದಲಿಸಿ ಲಕ್ಷ್ಮೀನಗರ್ ಎಂದು ಮಾಡುವ ಕುರಿತು ಹೇಳಿಕೆ ನೀಡಲಾಗುತ್ತಿದೆ. ಗುಜರಾತ್, ಮಹಾರಾಷ್ಟ್ರ, ತೆಲಂಗಾಣದಲ್ಲಿಯೂ ಕೂಡ ಪ್ರಮುಖ ನಗರಗಳ ಹೆಸರುಗಳನ್ನು ಬದಲಿಸುವ ಚಿಂತನೆಯನ್ನು ಬಿಜೆಪಿ ಹೊಂದಿದೆ. ವಿಶ್ವವಿಖ್ಯಾತ ತಾಜ್‌ಮಹಲ್ ಅನ್ನು ತೇಜೋಮಹಲ್ ಎಂಬುದಾಗಿ ಬಿಂಬಿಸುತ್ತಿರುವ ಸಂಘಪರಿವಾರದ ಪ್ರಯತ್ನ ಇಂದು ನಿನ್ನೆಯದ್ದಲ್ಲ. ಇದೀಗ ಅದೇ ತಾಜ್‌ಮಹಲ್‌ಗೆ ರಾಮ್ ಮಹಲ್ ಮತ್ತು ಆಝಮ್‌ಗಢ್‌ಗೆ ಆರ್ಯಮ್‌ಗಢ್ ಎಂದು ಬದಲಿಸುವ ಚಿಂತನೆಯೂ ಇದೆ. ಬಾಬರಿ ಮಸ್ಜಿದ್‌ನ ಜಾಗದಲ್ಲಿ ರಾಮ ಮಂದಿರವಿತ್ತು ಎಂಬ ವಿಚಾರವನ್ನು ಪ್ರಚಾರಪಡಿಸಿ ಬಿಜೆಪಿ ರಾಜಕೀಯವಾಗಿ ಬಲವರ್ಧಿಸುತ್ತಾ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಮುಸ್ಲಿಮ್ ಹೆಸರುಗಳನ್ನು ಬದಲಾಯಿಸಿ ಹಿಂದು ಹೆಸರುಗಳನ್ನು ನಾಮಕರಣ ಮಾಡುವುದರ ಹಿಂದೆ ಬಿಜೆಪಿ ಸಂಘಪರಿವಾರದ ಅಸಹಿಷ್ಣು ರಾಜಕಾರಣವು ಢಾಳಾಗಿ ಕಾಣಿಸುತ್ತಿದೆ. ಈ ದೇಶವು ಹಿಂದು-ಮುಸ್ಲಿಮರು ಪರಸ್ಪರ ಅನ್ಯೋನ್ಯವಾಗಿ ಕೂಡ ಬಾಳಿದ ದೇಶವಾಗಿದೆ. ತಮ್ಮ ಮೇಲಾದ ಆಕ್ರಮಣ, ದೌರ್ಜನ್ಯವನ್ನು ಇಲ್ಲಿನ ಹಿಂದು-ಮುಸ್ಲಿಮರು ಒಂದಾಗಿ ಎದುರಿಸಿದ್ದಾರೆ. ಬಹುತ್ವವು ದೇಶದ ಜೀವಾಳ. ಇಂಡೋ-ಅರೇಬಿಕ್ ಶಿಲ್ಪಕಲೆಗಳು ದೇಶವನ್ನು ಶ್ರೀಮಂತವನ್ನಾಗಿಸಿದೆ. ಭಾರತದಲ್ಲಿ ಪ್ರವಾಸೋದ್ಯಮ ಬೆಳೆಯಲು ಇದು ಕೂಡ ಮುಖ್ಯ ಕಾರಣವಾಗಿದೆ. ಭಾರತದ ಪ್ರವಾಸೋದ್ಯಮವು ದೇಶದ ಬೊಕ್ಕಸಕ್ಕೆ ಬಹಳಷ್ಟು ಲಾಭವನ್ನು ತಂದುಕೊಡುತ್ತಿದೆ. ಬಹುತ್ವ, ಸಾಮರಸ್ಯದ ವಿರೋಧಿಯಾಗಿರುವ ಸಂಘಪರಿವಾರವು ತನ್ನ ವಿಭಜನಕಾರಿ ಅಜೆಂಡಾಗಳನ್ನು ಜಾರಿ ತರಲು ಹೆಸರು ಬದಲಿಸುವಂತ ಕತ್ಯಗಳನ್ನು ನಡೆಸುತ್ತಲೇ ಬರುತ್ತಿದೆ.

ದೇಶದ ಜನರ ನೈಜ ಸಮಸ್ಯೆಗಳನ್ನು ಬದಿಗೆ ಸರಿಸುತ್ತಾ ಎಲ್ಲಾ ಸಮಸ್ಯೆಗಳಿಗೂ ಹಿಂದುತ್ವವೇ ನೈಜ ಪರಿಹಾರ ಎಂಬಂತೆ ಬಿಂಬಿಸಲಾಗುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಈ ದೇಶವು ಎಲ್ಲಾ ಧರ್ಮದ ಆಚಾರ ವಿಚಾರಗಳಿಗೆ ಸಮಾನ ಅವಕಾಶವನ್ನು ಕಲ್ಪಿಸಿದೆ. ಇಂದು ಭಾರತದಲ್ಲಿ ಜಗತ್ತಿನಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತಿದ್ದರೆ ಅದು ತನ್ನ ವಿವಿಧತೆಯಲ್ಲಿ ಏಕತೆಯ ಕಾರಣದಿಂದಾಗಿದೆ. ಹಿಂದುತ್ವ ಕೋಮುವಾದಿ ರಾಜಕಾರಣವನ್ನು ಸೋಲಿಸಿ ಈ ವೈಶಿಷ್ಟತೆಯನ್ನು ಉಳಿಸಿ ಬೆಳೆಸುವುದರಲ್ಲಿಯೇ ದೇಶದ ಹಿತವಿದೆ.