ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದ ಹಸನಬ್ಬನವರು 20 ವರ್ಷಗಳ ಬಳಿಕ ಮರಳಿ ಮನೆಗೆ !

Prasthutha|

► ಅನಾಥರಂತೆ ಫುಟ್’ಪಾತಿನಲ್ಲಿ ಬಿದ್ದ ಫೋಟೋ ವೈರಲ್ !
►PFI ಬೆಂಗಳೂರು ಕಾರ್ಯಕರ್ತರ ಮಾನವೀಯ ಕಾರ್ಯ
► ‘ಮೈಮೂನಾ ಫೌಂಡೇಶನ್’ ಆಂಬ್ಯುಲನ್ಸ್ ನಲ್ಲಿ ಮಂಗಳೂರಿಗೆ

- Advertisement -

ಬೆಂಗಳೂರು : ಮಂಗಳೂರು ಕುದ್ರೋಳಿ ಮೂಲದ ಹಸನಬ್ಬ ಯಾನೆ ಮೋನಾಕ ಎಂಬ ವ್ಯಕ್ತಿಯೊಬ್ಬರು ಅಸ್ವಸ್ಥಗೊಂಡು ಅನಾಥವಾಗಿ ಬೆಂಗಳೂರಿನ ಉಪ್ಪಾರಪೇಟೆ ಪೋಲೀಸ್ ಠಾಣೆಯ ಬಳಿ ಅಸಹಾಯಕರಾಗಿ ಬಿದ್ದಿರುವ ಫೋಟೊ ಒಂದು ಎರಡು ದಿನಗಳ ಹಿಂದೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.   ಇದನ್ನು ಕ್ಷಿಪ್ರವಾಗಿ ಗಣನೆಗೆ ತೆಗೆದುಕೊಂಡ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಂಗಳೂರು ಕರಾವಳಿ ಡಿವಿಷನ್ ಕಾರ್ಯಕರ್ತರು ಇಂದು ಮುಂಜಾನೆಯೇ ಹುಡುಕಾಡಿ ಮೆಜೆಸ್ಟಿಕ್ ಉಪ್ಪಾರಪೇಟೆ ಠಾಣೆಯ ಬಳಿ ಆ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. ಸ್ಥಳದಲ್ಲೇ  ಅವರಿಗೆ ಉಪಹಾರವನ್ನು ನೀಡಿ, ನಡೆದಾಡಲು ಅಸಾಧ್ಯವಾದ ಅವರನ್ನು ಆಟೋ ಮೂಲಕ ಪಕ್ಕದ ಸ್ನಾನ ಗೃಹಕ್ಕೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ, ಹೊಸ ಉಡುಪು ನೀಡಿ ಉಪಚರಿಸಿದ್ದಾರೆ. ಈ ತಂಡದೊಂದಿಗೆ ‘ಪ್ರಸ್ತುತ’ ದ ಬೆಂಗಳೂರು ವರದಿಗಾರ ರಿಲ್ವಾನ್ ಹುಸೈನ್ ವಳಾಲ್ ಅವರೂ ಕೂಡಾ ಜೊತೆಯಾಗಿ ಅವರೊಂದಿಗೆ ಕೊನೆಯ ವರೆಗೂ ಸಹಕಾರ ನೀಡಿದ್ದರು.

ಕರಾವಳಿ ಡಿವಿಷನ್ ಕಾರ್ಯಕರ್ತರು ಮಂಗಳೂರಿನ ಎಸ್‌ಡಿಪಿಐ ಮುಖಂಡ ಮುಝೈರ್ ಕುದ್ರೋಳಿ ಅವರನ್ನು ಸಂಪರ್ಕಿಸಿ ಹಸನಬ್ಬ ಅವರ ಮನೆಯನ್ನು ಸಂಪರ್ಕಿಸುವಂತೆ ಕೋರಿ ಅವರಿಗೆ ಮಾಹಿತಿ ನೀಡಿದರು. ಅವರನ್ನು ಮರಳಿ ಮಂಗಳೂರಿಗೆ ಕರೆ ತರುವ ಕಾರ್ಯದಲ್ಲಿ ಸಹಕರಿಸುವಂತೆ ಸಾಮಾಜಿಕ ಕಾರ್ಯಕರ್ತ ‘ಆಪತ್ಬಾಂಧವ’ ಆಸೀಫ್ ರವರ ಸಹಕಾರ ಕೋರಿದ್ದು, ಅವರು ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅವರ ಆಂಬ್ಯುಲೆನ್ಸ್ ಮೂಲಕ ಊರಿಗೆ ಕಳುಹಿಸಿ ಕೊಡುವ ವ್ಯವಸ್ಥೆ ಕೂಡಾ ಮಾಡಲಾಗಿದೆ. ಈ ಒಂದು ಮಾನವೀಯತೆಯ ಪರವಾಗಿರುವ ಕಾರ್ಯದಲ್ಲಿ ಪಾಪ್ಯುಲರ್ ಫ್ರಂಟ್ ಕರಾವಳಿ ಡಿವಿಷನ್ ಕಾರ್ಯಕರ್ತರಾದ ಇಸ್ಮಾಯಿಲ್ ಬಾವ, ಅಬ್ದುಲ್ ಗಫ್ಫಾರ್ ಕೆಮ್ಮಾರ, ಅಶ್ರಫ್ ನ್ಯಾಷನಲ್ ಮಾರ್ಕೇಟ್, ಅಶ್ರಫ್ ಕಲ್ಮಿಂಜ ದೇರಳಕಟ್ಟೆ, ಸಿದ್ದೀಕ್ ದಿಡುಪೆ ಇವರುಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.

- Advertisement -

‘ಅನಾಥ’ ಹಸನಬ್ಬನವರ ನೈಜ ಕಥೆಯೇನು?

1992ರಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಹೋದ ಹಸನಬ್ಬನವರು ಹಲವು ವರ್ಷಗಳ ಕಾಲ ವಿವಿಧ ಹೋಟೆಲ್ ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆ ಬಳಿಕ ಮನೆಯವರೊಂದಿಗೆ ಕೂಡಾ ಹೆಚ್ಚಿನ ಸಂಪರ್ಕವಿರಲಿಲ್ಲ ಎನ್ನಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಅವರ ಫೋಟೋ ವೈರಲ್ ಆಗುವ ವೇಳೆಗೆ ಅವರು ರೋಗಕ್ಕೆ ತುತ್ತಾಗಿದ್ದರು ಎನ್ನಲಾಗಿದೆ. ಹೊಟ್ಟೆಗೆ ಆಹಾರವಿಲ್ಲದೆ ತೀವ್ರವಾಗಿ ಬಲಹೀನತೆಗೊಳಗಾಗಿದ್ದರು. ‘ಪ್ರಸ್ತುತ’ ದ ಬೆಂಗಳೂರು ವರದಿಗಾರ ರಿಲ್ವಾನ್ ಅವರು ಸ್ನೇಹಿತರೊಂದಿಗೆ ಸೇರಿಕೊಂಡು ಹಸನಬ್ಬರವರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಉಪಚರಿಸಿ, ಆ ಬಳಿಕ ಅವರನ್ನು ಮಂಗಳೂರಿಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿಸಿದ್ದಾರೆ.

ಹಸನಬ್ಬನವರ ಮಗನೋರ್ವ ಉದ್ಯೋಗ ನಿಮಿತ್ತ ದುಬೈಯಲ್ಲಿದ್ದಾರೆಂಬ ಮಾಹಿತಿ ದೊರಕಿದೆ. ಹಸನಬ್ಬನವರ ಬಳಿ ಅವರ ಕುರಿತು ಮಾಹಿತಿ ಕೇಳಿದಾಗ ನನಗೆ ನನ್ನ ತಾಯಿ ಬೇಕೆಂದು ನಿರಂತರವಾಗಿ ಹೇಳುತ್ತಿದ್ದರು. ಇವರ ತಾಯಿ ಹತ್ತು ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದು, ತನ್ನ ಮಗನ ಬರುವಿಕೆಗಾಗಿ ಕಾಯುತ್ತಲೇ ಇದ್ದರು ಎನ್ನಲಾಗಿದೆ. ಇದೀಗ ಹಸನಬ್ಬನವರು ಬರೋಬ್ಬರಿ 20 ವರ್ಷಗಳ ಬಳಿಕ ಮೈಮೂನಾ ಫೌಂಡೇಶನ್ ನ ಕಾರ್ಯಕರ್ತರ ಜೊತೆಗೆ ಮರಳಿ ತವರೂರಿಗೆ ತೆರಳುತ್ತಿದ್ದಾರೆ.

https://youtu.be/rPBLgFLuMLo
Join Whatsapp