ದೊದೋಮಾ: ಪೂರ್ವ ಆಫ್ರಿಕಾದ ತಾಂಝಾನಿಯಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಸಮೀಯಾ ಝಲೂಹು ಹಸನ್ ಅಧಿಕಾರ ಸ್ವೀಕರಿಸಿದ್ದಾರೆ. ಅಧ್ಯಕ್ಷ ಜಾನ್ ಮಾಗುಫುಲಿ ಅವರ ಹಠಾತ್ ನಿಧನದಿಂದಾಗಿ ಸಮೀಯಾ ಅಧ್ಯಕ್ಷೆಯಾಗಿ ಅಧಿಕಾರಕ್ಕೇರಿದ್ದಾರೆ.
ಅಧ್ಯಕ್ಷರ ನಿಧನಕ್ಕೆ ಸಂತಾಪ ಸೂಚಿಸುವ ಮೂಲಕ 61 ರ ಹರೆಯದ ಸಮೀಯಾ ತಮ್ಮ ಮೊದಲ ಭಾಷಣವನ್ನು ಪ್ರಾರಂಭಿಸಿದರು. ದೇಶದಲ್ಲಿ 21 ದಿನಗಳ ಶೋಕಾಚರಣೆಯನ್ನೂ ಘೋಷಿಸಲಾಯಿತು. ಕೊರೋನಾದಿಂದ ಬಳಲುತ್ತಿದ್ದ ಜಾನ್ ಮಾಗುಫುಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ತಾಂಝಾನಿಯಾದ ಸಂವಿಧಾನದ ಪ್ರಕಾರ, ಅಧ್ಯಕ್ಷರು ಮೃತಪಟ್ಟರೆ ಉಪಾಧ್ಯಕ್ಷರು ತಮ್ಮ ಅವಧಿ ಮುಗಿಯುವವರೆಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಬೇಕು. 2015 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಜಾನ್ ಮಾಗುಫುಲಿ ಕಳೆದ ವರ್ಷ ಅಕ್ಟೋಬರ್ನಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.