ಮತ್ತೆ ಪೊಲೀಸ್ ಕಸ್ಟಡಿಗೆ ಸೇರಿದ ದರ್ಶನ್: ಪಶ್ಚಾತ್ತಾಪ ಪಡುತ್ತಿದ್ದಾರೆಯೇ ಸ್ಟಾರ್ ನಟ?

Prasthutha|

ಬೆಂಗಳೂರು: ಕನ್ನಡದ ಸ್ಟಾರ್ ನಟ ದರ್ಶನ್ ‘ಉಗುರಲ್ಲಿ ಹೋಗೋದಕ್ಕೆ ಕೊಡಲಿ ತಗೊಂಡರು’ ಎನ್ನುವಂತಹ ಪರಿಸ್ಥಿತಿ‌ಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವ ಅವರು ಕೊಲೆ ಆರೋಪದ ಪಶ್ಚಾತ್ತಾಪದಿಂದ ನರಳುತ್ತಿದ್ದಾರೆ ಎನ್ನಲಾಗಿದೆ. ಪರಿಚಯಸ್ಥ ಅಧಿಕಾರಿಗಳ ಬಳಿ‌ ತಪ್ಪಾಗೋಯ್ತು ಎನ್ನುತ್ತಿದ್ದಾರೆ ಎನ್ನಲಾಗಿದೆ. ತನ್ನೊಂದಿಗೆ ಸಹಚರರ ಜೀವನವೂ ಹಾಳು ಮಾಡಿದೆ ಎಂಬುದರ ಬಗ್ಗೆ ನಟ ಪಶ್ಚಾತ್ತಾಪ ಪಟ್ಟಿದ್ದಾರೆ, ಒಬ್ಬ ನಟನಾಗಿ ಉತ್ತಮ ಸ್ಥಾನದಲ್ಲಿದ್ದುಕೊಂಡು ಈ ಕೇಸ್ ನಲ್ಲಿ ಬಂಧನವಾಗಿರೋದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಅವರ ಮನಸ್ಥಿತಿ ತುಂಬ ಬದಲಾವಣೆ ಆಗಿದ್ದು, ಪಶ್ಚಾತಾಪದ ಮಾತುಗಳನ್ನು ಆಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್ ಅನ್ನು ಜೂನ್ 20ರವರೆಗೂ ಮತ್ತೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ 42ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.

ಭಾನುವಾರ, ಸೋಮವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳನ್ನು ವಿಜಯನಗರ ಉಪ ವಿಭಾಗ ಪೊಲೀಸರು ಶನಿವಾರವೇ ಆರ್ಥಿಕ ಅಪರಾಧಗಳ 42ನೇ ವಿಶೇಷ ಕೋರ್ಟ್ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಮುಂದೆ ಹಾಜರುಪಡಿಸಿದ್ದರು.

- Advertisement -

ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್, ಪ್ರಕರಣದ ತನಿಖೆಯ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ನೀಡಬೇಕು ಎಂದು ಕೋರಿದರು. ಪೊಲೀಸರು ಸ್ಥಳ ಮಹಜರು, ಸಾಕ್ಷ್ಯಗಳ ಕುರಿತ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು. 10 ಮೊಬೈಲ್ ವಶಕ್ಕೆ ಪಡೆದಿದ್ದು, ಸಿಡಿಆರ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಜತೆಗೆ ಮೊಬೈಲ್ ರಿಟ್ರೀವ್ ಮಾಡಬೇಕಿದೆ. 30 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು, ಚಿತ್ರದುರ್ಗದಲ್ಲಿ ಮಹಜರು ನಡೆದಿದೆ. ಮೈಸೂರಿನಲ್ಲಿ ಮಹಜರು ಬಾಕಿ ಇದೆ. ಹೀಗಾಗಿ 10 ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿದ್ದರು.

ಇದಕ್ಕೆ ದರ್ಶನ್ ಪರ ವಕೀಲರು, ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿಗಳ ಹೇಳಿಕೆಗಳು ಸೋರಿಕೆಯಾಗುತ್ತಿವೆ. ಹೀಗಾಗಿ ಮತ್ತೆ ಕಸ್ಟಡಿಗೆ ನೀಡುವುದು ಬೇಡ ಎಂದು ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಾಧೀಶರು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದ್ದಾರೆ.



Join Whatsapp