ಪೊಲೀಸ್ ಅಧಿಕಾರಿಯಿಂದ ತಪಾಸಣೆಯ ವೇಳೆ ಹಲ್ಲೆಗೊಳಗಾಗಿ ಮೃತಪಟ್ಟ ಅಮೆರಿಕಾದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಕುಟುಂಬಕ್ಕೆ 20 ಮಿಲಿಯನ್ ಡಾಲರ್ (ಸುಮಾರು 196.2 ಕೋಟಿ ರೂ) ಹಣವನ್ನು ಪಾವತಿಸಲು ಒಪ್ಪಿಗೆ ನೀಡಿದೆ.
ಬಿಳಿಯ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್, ಸುಮಾರು ಒಂಬತ್ತು ನಿಮಿಷಗಳ ಕಾಲ ಕಪ್ಪು ವರ್ಣೀಯ ವ್ಯಕ್ತಿ ಫ್ಲಾಯ್ಡ್ ರ ಕುತ್ತಿಗೆಯ ಮೇಲೆ ತನ್ನ ಮಂಡಿಯೂರಿರುವುದರಿಂದ 46 ವರ್ಷದ ಫ್ಲಾಯ್ಡ್ ಮೇ ತಿಂಗಳಲ್ಲಿ ನಿಧನರಾಗಿದ್ದರು. “ನನಗೆ ಉಸಿರಾಡಲು ಆಗುತ್ತಿಲ್ಲ” ಎಂದು ಫ್ಲಾಯ್ಡ್ ಅಂಗಲಾಚುತ್ತಿರುವ ವೀಡಿಯೋ ವ್ಯಾಪಕವಾಗಿ ಹರಿದಾಡಿತ್ತು. ಇದರ ವಿರುದ್ಧ ತೀವ್ರವಾದ ಆಕ್ರೋಶ ಪ್ರಕಟವಾಗಿದ್ದು, ಅಮೆರಿಕಾದ ಇತಿಹಾಸದಲ್ಲೇ ಕಾಣದ ಅತಿದೊಡ್ಡ ಪ್ರತಿಭಟನಾ ಚಳುವಳಿಯಾಗಿ ಮಾರ್ಪಟ್ಟಿತು. ಜಗತ್ತಿನಾದ್ಯಂತ Black Lives Matter ಎಂಬ ಒಕ್ಕಣೆಗಳು ವ್ಯಾಪಕವಾಗಿ ಪ್ರಚಾರ ಪಡೆದಿದ್ದವು.
ಫ್ಲಾಯ್ಡ್ ನಿಧನದ ನಂತರ ಕುಟುಂಬ ಸದಸ್ಯರ ಪರವಾಗಿ ವಕೀಲ ಬೆಂಜಮಿನ್ ಕ್ರಂಪ್ ಅವರು ಪೊಲೀಸ್ ಅಧಿಕಾರಿಯ ವಿರುದ್ಧ ಮೊಕದ್ದಮೆ ಹೂಡಿದ್ದರು. ಇದರ ಮಧ್ಯೆ ನಡೆದ ಖಾಸಗಿ ಮಾತುಕತೆಯಲ್ಲಿ ಫ್ಲಾಯ್ಡ್ ಕುಟುಂಬಕ್ಕೆ ಬರೋಬ್ಬರಿ 20 ಮಿಲಿಯನ್ ಡಾಲರ್ ಪಾವತಿಸಲು ಮಿನ್ನಿಯಾ ಪೊಲೀಸ್ ಒಪ್ಪಿಗೆ ನೀಡಿದೆ. ಇದು ಸಾವಿಗೆ ನೀಡುವ ಅತ್ಯಂತ ದೊಡ್ಡ ಪರಿಹಾರ ಮತ್ತು ಪೊಲೀಸರ ಕೈಯಲ್ಲಿ ಒಬ್ಬ ಕಪ್ಪು ವ್ಯಕ್ತಿಯ ಸಾವು “ಇನ್ನು ಮುಂದೆ ಕ್ಷುಲ್ಲಕ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕ್ರಂಪ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.