ಬೆಂಗಳೂರು: ಮುಖ್ಯಮಂತ್ರಿ ಈಗ ಪತ್ರ ಬರೆದಿದ್ದಾರೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ. ಆದರೆ ಮೇ 1ರಂದೇ ಕೇಂದ್ರಕ್ಕೆ ಸಿಎಂ ಪತ್ರ ಬರೆದಿದ್ದಾರೆ. ಆ ಪತ್ರ ಎಲ್ಲಿ ಹೋಯಿತು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿದೇಶಾಂಗ ಸಚಿವರು, ಇನ್ನೆರಡು ದಿನಗಳಲ್ಲಿ ರದ್ದು ಮಾಡುವುದಾಗಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ ಅಷ್ಟೇ. ಅಷ್ಟಕ್ಕೂ ಮೇ 1ರಂದೇ ಬರೆದ ಪತ್ರ ಎಲ್ಲಿ ಹೋಯಿತು? ಮುಖ್ಯಮಂತ್ರಿ ಪತ್ರ ಪ್ರಧಾನಿ ಕಚೇರಿಗೆ ಹೋಗುತ್ತದೆ ಎಂದಾದರೆ ಅದಕ್ಕೆ ಗೌರವ ಸಿಗಬೇಕಲ್ಲವೇ ಎಂದು ಪ್ರಶ್ನಿಸಿದರು.
ಪೆನ್ ಡ್ರೈವ್ ಪ್ರಕರಣದಲ್ಲಿ ನಿಜವಾದ ಆರೋಪಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿರುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವೂ ಅದೇ ಕೆಲಸ ಮಾಡುತ್ತಿದ್ದೇವೆ. ನಿಜವಾದ ಆರೋಪಿ ಯಾರು? ಪ್ರಕರಣದಲ್ಲಿ ಪ್ರಜ್ವಲ್ ಪಾತ್ರ ಏನು? ಎಂಬುದಕ್ಕಾಗಿಯೇ ತನಿಖೆ ನಡೆಸಬೇಕು ಅಂತಾನೇ ಎಸ್‌ಐಟಿ ರಚಿಸಲಾಗಿದೆ. ಗಾಳಿಯಲ್ಲಿ ಗುಂಡು ಹೊಡೆದಂತೆ, ಯಾರದ್ದೋ ಹೆಸರು ಹೇಳುವ ಅಗತ್ಯವಿಲ್ಲ. ತನಿಖೆ ಆಗುವ ಮುಂಚೆಯೇ ಹೇಳಿಕೆಗಳನ್ನು ನೀಡಿದರೆ ತನಿಖೆಗೆ ತೊಂದರೆಯಾಗುತ್ತದೆ ಎಂದು ಹೇಳಿದರು.