2020 ರಲ್ಲಿ ಜಗತ್ತಿನಾದ್ಯಂತ ಹತ್ಯೆಯಾದ ಪತ್ರಕರ್ತರ ಸಂಖ್ಯೆ ಎಷ್ಟು ಗೊತ್ತೇ?

Prasthutha|

ಬ್ರುಸೆಲ್ಸ್‌: ಜಗತ್ತಿನಾದ್ಯಂತ 2020ರಲ್ಲಿ ಅರವತ್ತೈದು ಮಂದಿ ಕಾರ್ಯನಿರತ ಪತ್ರಕರ್ತರು ಹಾಗೂ ಮಾಧ್ಯಮ ಸಿಬ್ಬಂದಿಗಳ ಹತ್ಯೆ ಮಾಡಲಾಗಿದೆ ಎಂದು ಅಂತರರಾಷ್ಟ್ರೀಯ ಪತ್ರಕರ್ತರ ಒಕ್ಕೂಟ (ಐಎಫ್‌ಜೆ) ಪ್ರಕಟಿಸಿದೆ.

- Advertisement -

2019ರಲ್ಲಿ ವರದಿಯಾಗಿರುವ ಹತ್ಯೆ ಪ್ರಕರಣಗಳಿಗಿಂತ 17 ಹೆಚ್ಚು ಹಾಗೂ ಸರಿಸುಮಾರು 1990ರಲ್ಲಿ ನಡೆದಿದ್ದ ಹತ್ಯೆಗಳಷ್ಟೇ ಸಂಖ್ಯೆ 2020ರಲ್ಲಿಯೂ ದಾಖಲಾಗಿದೆ ಎಂದು ಐಎಫ್‌ಜೆ ಪತ್ರಕರ್ತರ ಹತ್ಯೆಗೆ ಸಂಬಂಧಿಸಿದ ವಾರ್ಷಿಕ ವರದಿಯನ್ನು ಪ್ರಕಟಿಸಿದೆ.

16 ರಾಷ್ಟ್ರಗಳಲ್ಲಿ ಮಾಧ್ಯಮ ವ್ಯಕ್ತಿಯನ್ನು ನೇರವಾಗಿ ಗುರಿಯಾಗಿಸಿ ದಾಳಿ ನಡೆಸಿರುವುದು, ಬಾಂಬ್‌ ಹಾಗೂ ಗುಂಡಿನ ದಾಳಿಗಳ ಮೂಲಕ ಹತ್ಯೆ ನಡೆಸಲಾಗಿದೆ ಎಂದು ಐಎಫ್‌ಜೆ ಹೇಳಿದೆ.

- Advertisement -

1990ರಿಂದ ಹತ್ಯೆಗೀಡಾದ ಪತ್ರಕರ್ತರ ವಿವರಗಳನ್ನು ಐಎಫ್‌ಜೆ ಸಂಗ್ರಹಿಸುತ್ತಿದ್ದು, ಈವರೆಗೂ 2,680 ಪತ್ರಕರ್ತರ ಹತ್ಯೆಯಾಗಿದೆ.

‘ಮೆಕ್ಸಿಕೋ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಸೊಮಾಲಿಯಾದಲ್ಲಿ ಹಿಂಸಾಚಾರ, ಅಸಹಿಷ್ಣತೆಯ ಕಾರಣಗಳಿಂದಾಗಿ ಭಾರತ ಹಾಗೂ ಫಿಲಿಪ್ಪೀನ್ಸ್‌ನಲ್ಲಿಯೂ ಮಾಧ್ಯಮ ಸಿಬ್ಬಂದಿಯ ರಕ್ತ ಹರಿದಿದೆ’ ಎಂದು ಐಎಫ್‌ಜೆ ಪ್ರಧಾನ ಕಾರ್ಯದರ್ಶಿ ಆಂಥೊನಿ ಬೆಲಾಂಜರ್‌ ಹೇಳಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಮೆಕ್ಸಿಕೊದಲ್ಲಿ ಅತಿ ಹೆಚ್ಚು ಪತ್ರಕರ್ತರ ಹತ್ಯೆ ನಡೆದಿದೆ. 2020ರಲ್ಲಿ 14 ಪತ್ರಕರ್ತರ ಹತ್ಯೆ ಮಾಡಲಾಗಿದೆ. ಅಫ್ಘಾನಿಸ್ತಾನದಲ್ಲಿ 10 ಜನ, ಪಾಕಿಸ್ತಾನದಲ್ಲಿ ಒಂಬತ್ತು ಮಂದಿ, ಭಾರತದಲ್ಲಿ 8 ಮಂದಿ, ಫಿಲಿಪ್ಪೀನ್ಸ್‌ ಮತ್ತು ಸಿರಿಯಾದಲ್ಲಿ ತಲಾ ನಾಲ್ಕು ಮಂದಿ, ನೈಜೀರಿಯಾ ಹಾಗೂ ಯೆಮನ್‌ನಲ್ಲಿ ತಲಾ ಮೂವರು ಪತ್ರಕರ್ತರ ಹತ್ಯೆ ಮಾಡಲಾಗಿದೆ.

ಇರಾಕ್‌, ಸೊಮಾಲಿಯಾ, ಬಾಂಗ್ಲಾದೇಶ, ಕ್ಯಾಮೆರೂನ್‌, ಪರಾಗ್ವೆ, ರಷ್ಯಾ, ಸ್ವೀಡನ್‌ ಹಾಗೂ ಹಂಡೋರಸ್‌ನಲ್ಲೂ ಪತ್ರಕರ್ತರ ಹತ್ಯೆಯಾಗಿದೆ.

ಕೆಲಸದ ಕಾರಣಗಳಿಂದಾಗಿಯೇ 2021ರ ಮಾರ್ಚ್‌ ವರೆಗೂ ಜಗತ್ತಿನಾದ್ಯಂತ 229 ಪತ್ರಕರ್ತರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಟರ್ಕಿಯಲ್ಲಿ ಅತಿ ಹೆಚ್ಚು ಪತ್ರಕರ್ತರನ್ನು ಜೈಲಿಗೆ ಕಳುಹಿಸಲಾಗಿದೆ. ಕನಿಷ್ಠ 67 ಮಂದಿ ಮಾಧ್ಯಮ ಸಿಬ್ಬಂದಿ ಟರ್ಕಿಯಲ್ಲಿ ಸೆರೆ ವಾಸದಲ್ಲಿದ್ದಾರೆ. ಚೀನಾದಲ್ಲಿ 23 ಪತ್ರಕರ್ತರು, ಈಜಿಪ್ಟ್‌ನಲ್ಲಿ 20 ಜನ, ಎರಿಟ್ರಿಯಾದಲ್ಲಿ 16 ಜನ ಹಾಗೂ ಸೌದಿ ಅರೇಬಿಯಾದಲ್ಲಿ 14 ಜನ ಪತ್ರಕರ್ತರನ್ನು ಬಂಧನದಲ್ಲಿ ಇಡಲಾಗಿದೆ.



Join Whatsapp