ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬೆಂಬಲ ನೀಡಿ ರಾಜಕೀಯ ಪುನರ್ಜನ್ಮ ನೀಡಿದ ನೀಡಿದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ನಾಯಕ ಖಲೀಮುಲ್ಲಾ ಖಾನ್ಗೆ ಈವರೆಗೂ ಯಾವುದೇ ಸ್ಥಾನಮಾನವನ್ನೂ ನೀಡಿಲ್ಲ. ಹೀಗಾಗಿ, ಸಿದ್ದರಾಮಯ್ಯ ಕೃತಜ್ಞತೆ ಇಲ್ಲದ ನಾಯಕರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ವಾಗ್ದಾಳಿ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಿಂದ ಹೊರಬಂದಿದ್ದ ಖಲೀಮುಲ್ಲಾ ಖಾನ್ 2006ರ ವಿಧಾನಸಭಾ ಚುನಾವನೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಖಲೀಮುಲ್ಲಾ ಖಾನ್ ಕನಿಷ್ಠ 10 ಸಾವಿರ ಮತಗಳನ್ನು ಪಡೆಯುವ ಸಾಧ್ಯತೆಯಿತ್ತು. ಹಾಗಾಗಿ, ಖಲೀಮುಲ್ಲಾ ಖಾನ್ ಅವರ ಬೆಂಬಲಕ್ಕಾಗಿ ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದರು. ಆದರೆ, ಕಾಂಗ್ರೆಸ್ ನಾಯಕರು ಮನವಿ ಮಾಡಿದ ಮೇರೆಗೆ ಖಲೀಮುಲ್ಲಾ ಖಾನ್ ಅವರು ಕಾಂಗ್ರೆಸ್ ಬೆಂಬಲಿಸಿದರು.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮಾತನ್ನೂ ಮೀರಿ ಚಾಮುಂಡೇಶ್ವರಿ ಕ್ಷೇತ್ರದ ನಾಯಕ ಖಲೀಮುಲ್ಲಾ ಖಾನ್ ಅವರು ಕಾಂಗ್ರೆಸ್ಗೆ ಬೆಂಬಲಿಸಿದ ಪರಿಣಾಮವಾಗಿ ಅಂದು ಸಿದ್ದರಾಮಯ್ಯಗೆ ರಾಜಕೀಯ ಪುನರ್ಜನ್ಮ ಸಿಕ್ಕಿತು. ಆದರೆ, ಸಿದ್ದರಾಮಯ್ಯ ಅದಾದ ನಂತರ ಎರಡು ಬಾರಿ ಮುಖ್ಯಮಂತ್ರಿ ಆದರೂ ಕೂಡ ಅವರಿಗೆ ಈವರೆಗೂ ಯಾವುದೇ ಸ್ಥಾನಮಾನವನ್ನೂ ಕೊಟ್ಟಿಲ್ಲ. ಹಾಗಾಗಿ ಸಿದ್ದರಾಮಯ್ಯ ವಚನಭ್ರಷ್ಟ, ಕೃತಜ್ಞತೆ ಇಲ್ಲದ ನಾಯಕ, ಹತ್ತಿದ ಏಣಿಯನ್ನೇ ಒದೆಯುವ ಗುಂಪಿಗೆ ಸೇರಿದವರು ಎಂದು ಹೆಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.