ಶಿವಮೊಗ್ಗ: ಪುತ್ರನಿಗೆ ಟಿಕೆಟ್ ತಪ್ಪಿದ್ದಕ್ಕೆ ಸ್ವಪಕ್ಷೀಯರ ವಿರುದ್ಧವೇ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಒಟ್ಟು 98.92 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿದ್ದಾರೆ.
4.28 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 10.95 ಕೋಟಿ ರೂ. ಮೌಲ್ಯದ ಸ್ತಿರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಪತ್ನಿ ಜಯಲಕ್ಷ್ಮೀ ಹೆಸರಿನಲ್ಲಿ 35.20 ಕೋಟಿ ರೂ ಮೌಲ್ಯದ ಆಸ್ತಿ ಇರುವುದಾಗಿಯೂ ಅವರು ಘೋಷಿಸಿದ್ದಾರೆ.
ಈಶ್ವರಪ್ಪ 25 ಲಕ್ಷ ರೂ. ಹಾಗೂ ಅವರ ಪತ್ನಿ ಜಯಲಕ್ಷ್ಮೀ 2 ಲಕ್ಷ ರೂ. ನಗದು ಹೊಂದಿರುವುದಾಗಿ ತಿಳಿಸಿದ್ದಾರೆ. ಈಶ್ವರಪ್ಪ ಹೆಸರಿನಲ್ಲಿ 300 ಗ್ರಾಂ ಬಂಗಾರ, 2 ಕೆಜಿ ಬೆಳ್ಳಿ, ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 500 ಗ್ರಾಂ ಬಂಗಾರ, 5 ಕೆಜಿ ಬೆಳ್ಳಿ, ನಿಧಿಗೆ ಗ್ರಾಮದಲ್ಲಿ ಬಳಿ 1 ಎಕರೆ 31 ಗುಂಟೆ ಕೃಷಿ ಭೂಮಿ ಇದ್ದು, 4 ಎಕರೆ 24 ಗುಂಟೆ ಕೃಷಿಯೇತರ ಭೂಮಿ ಇದೆ. ಶಿವಮೊಗ್ಗದಲ್ಲಿ ವಾಸದ ಮನೆ. ಬೆಂಗಳೂರಿನ ಜಯನಗರದಲ್ಲಿ ನಿವೇಶನ ಇರುವುದಾಗಿ ತಿಳಿಸಿದ್ದಾರೆ.
ಈಶ್ವರಪ್ಪ ಹೆಸರಿನಲ್ಲಿ ಸಾಲ 5.87 ಕೋಟಿ ರೂ. ಸಾಲ ಇದ್ದು, ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 70.80 ಲಕ್ಷ ರೂ. ಇದೆ. ಈಶ್ವರಪ್ಪ ಯಾವುದೇ ವಾಹನ ಹೊಂದಿಲ್ಲ ಎಂದು ಘೋಷಿಸಿದ್ದು, 2022-23ನೇ ಹಣಕಾಸು ವರ್ಷದಲ್ಲಿ ವಾರ್ಷಿಕ ಆದಾಯ 98.92 ಲಕ್ಷ ಎಂದು ಘೋಷಿಸಿದ್ದಾರೆ.