ಬೀದರ್: ದುರುದ್ದೇಶದಿಂದ ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಡಿಸಿಸಿ) ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಸಲಾಗಿದೆ. ಅಲ್ಲಿ ಯಾವುದೇ ಹಣಕಾಸಿನ ವ್ಯವಹಾರವೇ ನಡೆದಿಲ್ಲ ಎಂದು ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕಿನ ಮೇಲೆ ದಾಳಿ ನಡೆಸಿದ್ದರಿಂದ ರೈತರು, ಕೃಷಿಕರ ಹಣಕಾಸಿನ ವಹಿವಾಟು, ಹಣ ಪಾವತಿಗೆ ಸಮಸ್ಯೆ ಆಗಲಿದೆ. ಸುಮಾರು ಮೂರು ಲಕ್ಷ ರೈತರಿಗೆ ಇದರಿಂದ ತೊಂದರೆ ಆಗಲಿದೆ ಎಂದರು.
ಇಡಿ, ಸಿಬಿಐ, ಐ.ಟಿ ಸೇರಿದಂತೆ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ನಮ್ಮ ಪಕ್ಷದ ಮುಖಂಡರು ಹೇಳುತ್ತಲೇ ಬಂದಿದ್ದಾರೆ. ಅದರಲ್ಲೂ ಲೋಕಸಭೆಗೆ ಚುನಾವಣೆ ಘೋಷಣೆಯಾದ ನಂತರ ಈ ದಾಳಿಗಳು ಹೆಚ್ಚಾಗಿವೆ. ಒಬ್ಬ ಬಿಜೆಪಿ ಸಮರ್ಥಕರ ಮೇಲೆ ಇದುವರೆಗೆ ದಾಳಿ ನಡೆದಿಲ್ಲ ಎಂದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಹೋದರ ಅಧ್ಯಕ್ಷರಾಗಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತಂಡ ಶುಕ್ರವಾರ ದಾಳಿ ನಡೆಸಿದೆ.