ಮಲಪ್ಪುರಂ: ‘ಭಾರತ್ ಮಾತಾ ಕಿ ಜೈ’ ಮತ್ತು ‘ಜೈ ಹಿಂದ್’ ಘೋಷಣೆಗಳನ್ನು ಮೊದಲು ಕೂಗಿದ್ದು ಮುಸ್ಲಿಮರು ಎಂದು ಕೇರಳ ಸಿಎಂ ಪುಣರಾಯಿ ವಿಜಯನ್ ಹೇಳಿದ್ದಾರೆ. ಇದು ತಿಳಿದ ಮೇಲೆ ಈ ಘೋಷಣೆಗಳನ್ನು ಸಂಘ ಪರಿವಾರವು ಕೈ ಬಿಡುವುದೇ ಎಂದು ಅವರು ಪ್ರಶ್ನಿಸಿದ್ದಾರೆ.
ಮಲಪ್ಪುರಂನಲ್ಲಿ ಸಿಎಎ ವಿರೋಧಿಸಿ ಸಿಪಿಐ(ಎಂ) ಆಯೋಜಿಸಿದ್ದ ನಾಲ್ಕನೇ ರ್ಯಾಲಿಯಲ್ಲಿ ಸಿಎಂ ಪಿಣರಾಯಿ ವಿಜಯನ್ ಮಾತನಾಡಿದರು.
‘ಭಾರತ್ ಮಾತಾ ಕಿ ಜೈ’ ಘೋಷಣೆಯನ್ನು ರೂಪಿಸಿದ್ದು ಅಜೀಮುಲ್ಲಾ ಖಾನ್ ಎನ್ನುವ ಮುಸ್ಲಿಂ ವ್ಯಕ್ತಿ. ‘ಜೈ ಹಿಂದ್’ ಘೋಷಣೆಯನ್ನು ಮೊದಲು ಕೂಗಿದ್ದು ರಾಜತಾಂತ್ರಿಕ ಅಧಿಕಾರಿಯಾಗಿದ್ದ ಅಬಿದ್ ಹಸನ್ ಎಂದು ಪಿಣರಾಯ್ ವಿಜಯನ್ ಮಾಹಿತಿ ನೀಡಿದರು.
50 ಉಪನಿಷತ್ಗಳನ್ನು ಸಂಸ್ಕೃತದಿಂದ ಪರ್ಷಿಯನ್ ಭಾಷೆಗೆ ಅನುವಾದ ಮಾಡಿಸಿ ಅದನ್ನು ಜಗತ್ತಿನ ಬೇರೆ ಬೇರೆ ಭಾಗ ಮುಟ್ಟಲು ನೆರವಾದವರು ಮೊಘಲ್ ದೊರೆ ಶಹಜಹಾನ್ನ ಮಗ ದಾರಾ ಶಿಖೋ ಆಗಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಮುಸ್ಲಿಮರು ನಿರ್ಣಾಯಕ ಪಾತ್ರ ವಹಿಸಿದ್ದರು. ಆದರೆ ಬಿಜೆಪಿ ಸರ್ಕಾರ ಸಿಎಎ ಜಾರಿಗೊಳಿಸುವ ಮೂಲಕ ಮುಸ್ಲಿಮರನ್ನು ದೇಶದ ಎರಡನೇ ದರ್ಜೆ ಪ್ರಜೆಗಳನ್ನಾಗಿಸಲು ಹೊರಟಿದೆ ಎಂದು ಪಿಣರಾಯ್ ವಿಜಯನ್ ಆಕ್ರೋಶ ವ್ಯಕ್ತಪಡಿಸಿದರು.
ಆರ್ಎಸ್ಎಸ್ ಮುಖಂಡ ಎಂ.ಎಸ್.ಗೋಳ್ವಾಲ್ಕರ್ ಅವರ ಒಂದು ಪುಸ್ತಕದಿಂದ ‘ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಕಮ್ಯುನಿಸ್ಟರು ಈ ದೇಶದ ಆಂತರಿಕ ಶತ್ರುಗಳು’ ಎಂಬ ಹೇಳಿಕೆಯನ್ನು ಉಲ್ಲೇಖಿಸಿದ ಪಿಣರಾಯ್ ವಿಜಯನ್, ಇದನ್ನು ಅವರು ಪ್ರಾಚೀನ ಗ್ರಂಥಗಳು, ಪುರಾಣ, ವೇದ ಅಥವಾ ಮನುಸ್ಮೃತಿಯಿಂದ ತೆಗೆದುಕೊಂಡಿಲ್ಲ. ಬದಲಿಗೆ ಇದನ್ನು ಹಿಟ್ಲರ್ನಿಂದ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.