ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಾಜಿ ಸಿಎಂ ವಿರುದ್ಧ ಪೋಕ್ಸೋ ಹಾಗೂ ಐಪಿಸಿ ಸೆಕ್ಷನ್ 354 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ತೆಯ ತಾಯಿ ಗುರುವಾರ ಸಂಜೆ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ದೂರು ನೀಡಿದ್ದು, ದೂರಿನನ್ವಯ ಸದಾಶಿವನಗರ ಪೊಲೀಸ್ ಠಾಣೆ ಪೊಲೀಸರು ಗುರುವಾರ ಮಧ್ಯರಾತ್ರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನಲ್ಲಿ ಏನಿದೆ?
ಅಪ್ರಾಪ್ತ ಮಗಳ ಮೇಲೆ ಈ ಹಿಂದೆ ಆಗಿದ್ದ ಅತ್ಯಾಚಾರ ಸಂಬಂಧ ನ್ಯಾಯ ಒದಗಿಸುವಂತೆ ಕೋರಿ, ಎಸ್ಐಟಿ ತನಿಖೆಗೆ ವಹಿಸುವಂತೆ ಮನವಿ ಮಾಡಲು 2024ರ ಫೆಬ್ರುವರಿ 2ರಂದು ಯಡಿಯೂರಪ್ಪನವರ ಮನೆಗೆ ಸಂತ್ರಸ್ತ ಬಾಲಕಿ ಹಾಗೂ ತಾಯಿ ಹೋಗಿದ್ದರು. ಆ ವೇಳೆ 9 ನಿಮಿಷಗಳ ಕಾಲ ಯಡಿಯೂರಪ್ಪ ಇವರೊಂದಿಗೆ ಮಾತನಾಡಿದ್ದರು. ಇಬ್ಬರಿಗೂ ಟೀ ಕುಡಿಸಿದ್ದರು. ಬಾಲಕಿಯು ಯಡಿಯೂರಪ್ಪನವರನ್ನು ತಾತಾ ಎಂದು ಕರೆಯುತ್ತಿದ್ದರು. ಯಡಿಯೂರಪ್ಪ ಬಾಲಕಿಯ ಕೈ ಹಿಡಿದುಕೊಂಡೇ ಮಾತನಾಡುತ್ತಿದ್ದರು. ಬಾಲಕಿಯ ತಾಯಿ ಮಾಜಿ ಮುಖ್ಯಮಂತ್ರಿಯನ್ನು ಅಪ್ಪಾಜಿ ಎಂದು ಸಂಬೋಧಿಸುತ್ತಿದ್ದರು. ಆ ವೇಳೆ ಬಾಲಕಿಯನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದ ಯಡಿಯೂರಪ್ಪ, ಸುಮಾರು 5 ನಿಮಿಷಗಳ ಕಾಲ ಬಾಗಿಲು ಹಾಕಿಕೊಂಡು ಇದ್ದರು. ಬಾಲಕಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಯಡಿಯೂರಪ್ಪ ಹೊರಗೆ ಬಿಟ್ಟಿಲ್ಲ. ಆ ವೇಳೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ. ಬಾಲಕಿಯು ರೂಮಿನಿಂದ ಓಡಿಬಂದು ತಾಯಿಗೆ ವಿಷಯವನ್ನು ತಿಳಿಸಿದ್ದಾರೆ. “ಹೀಗೇಕೆ ಮಾಡಿದಿರಿ?” ಎಂದು ತಾಯಿ ಕೇಳಲಾಗಿ, “ರೇಪ್ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಹಾಗೆ ಮಾಡಿದೆ” ಎಂದಿದ್ದಾರೆ. ತಕ್ಷಣವೇ ಯಡಿಯೂರಪ್ಪ ಕ್ಷಮೆ ಯಾಚಿಸುತ್ತಾ, “ಈ ವಿಚಾರವನ್ನು ಹೊರಗಡೆ ಎಲ್ಲಿಯೂ ಹೇಳಬಾರದು” ಎಂದು ತಡೆಯಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳಲು ಹೋದಾಗ ಲೈಂಗಿಕ ಕಿರುಕುಳ ನೀಡಿರುವ ಯಡಿಯೂರಪ್ಪನವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಂತ್ರಸ್ತ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
53 ಮಂದಿ ವಿರುದ್ಧ ದೂರು ನೀಡಿದ ಮಹಿಳೆ
ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು , ಬಿಸಿನೆಸ್ ಮ್ಯಾನ್ಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ದವೇ ಸಂತ್ರಸ್ತ ಬಾಲಕಿಯ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.