ಸಿಎಂ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ಹೈಲೈಟ್ಸ್

Prasthutha|

ಬೆಂಗಳೂರು:ವಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಂಪುಟ ಸಭೆಯ ಹೈಲೈಟ್ಸ್ ಹೀಗಿದೆ:

- Advertisement -

ನಿವೇಶನ ಹಂಚಿಕೆಯಾದವರಿಗೆ ಕಂತು ಕಟ್ಟಲು 3 ತಿಂಗಳ ಅವಕಾಶ

ಬೆಂಗಳೂರಿನಲ್ಲಿ ಕೆಂಪೇಗೌಡ ಬಡಾವಣೆ ಹಾಗೂ ಅಂತಹ ಬಡಾವಣೆಗಳಲ್ಲಿ 2016 -2018 ರ ಅವಧಿಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅವುಗಳನ್ನು ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ. ಕೆಲವರು ಕಂತಿನ ಪ್ರಕಾರ ಹಣ ಪಾವತಿಸಿ ಲೀಸ್ ಕಂ ಸೇಲ್ ಡೀಡ್ ಮಾಡಿಕೊಂಡಿದ್ದಾರೆ. ಕೆಲವರು ಸಮಯಕ್ಕೆ ಕಂತು ಕಟ್ಟಲು ಸಾಧ್ಯವಾಗದೇ ಇನ್ನೊಂದು ಅವಕಾಶ ಕೊಡಲು ಮನವಿ ಮಾಡಿಕೊಂಡಿದ್ದಾರೆ. ಅವರಿಗೆ ಹಣ ಕಟ್ಟಲು ಮೂರು ತಿಂಗಳ ಅವಕಾಶವನ್ನು ಕೊಟ್ಟು ಬಾಕಿ ಹಣ ಹಾಗೂ 12% ಬಡ್ಡಿಯೊಂದಿಗೆ ಪಾವತಿಸಿ ಲೀಸ್ ಕಂ ಸೇಲ್ ಡೀಡ್ ಮಾಡಿಸಿಕೊಳ್ಳಲು ಅವಲಾಶ ಕಲ್ಪಿಸಲು ಸಚಿವ ಸಂಪುಟ ತೀರ್ಮಾನ ಮಾಡಿದೆ.

- Advertisement -

ರಸ್ತೆ ಅಗಲೀಕರಣ: ಟಿ.ಡಿ.ಆರ್. ಕೊಡಲು ತೀರ್ಮಾನ

ಅರಮನೆಯ ಒಳಗೆ ಕಾಂಪೌಂಡ್ ಹಾಕಲಾಗಿದೆ. ಅರಮನೆ ಹೊರಗಿನ ಜಾಗವನ್ನು ರಸ್ತೆ ಅಗಲೀಕರಣಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ನಡೆಯುತ್ತಿದ್ದು ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಯುಕ್ತರು ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿದೆ. ಮುಂದಿನ ವಾರ ಪ್ರಕರಣವಿದ್ದು ಸರ್ವೋಚ್ಛ ನ್ಯಾಯಾಲಯವು ರಸ್ತೆ ಅಗಲೀಕರಣ ಮಾಡುವುದಾದರೆ ಟಿ.ಡಿ.ಆರ್ ಕೊಟ್ಟು ಸ್ವಾಧೀನ ಮಢಿಕೊಳ್ಳಬೇಕೆಂದು ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ. ಹಿಂದಿನ ಸರ್ಕಾರ ರಸ್ತೆ ಅಗಲೀಕರಣ ಮಾಡುವ ಅವಶ್ಯಕತೆ ಇಲ್ಲ ಎಂದು ತೀರ್ಮಾನಿಸಿತ್ತು. ನಂತರ ಅವರು ಪುನ: ನ್ಯಾಯಾಲಯಕ್ಕೆ ಹೋಗಿ ಈಗ ರಸ್ತೆ ಅಗಲೀಕರಣ ಬೇಡ ಎನ್ನುತ್ತಿದ್ದಾರೆ. ಆದರೆ 2016 ನಲ್ಲಿಯೇ ಒಳಗಡೆ ಕಾಂಪೌಂಡ್ ಕಟ್ಟಿದ್ದಾರೆ. ಆದ್ದರಿಂದ ನಮ್ಮ ಕೈವಶದಿಂದ ತಪ್ಪಿಹೋಗಿದೆ. ಹೀಗಾಗಿ ಇವರು ಜಾಗ ಪಡೆದು ಈಗ ಬೇಡ ಎನ್ನುತ್ತಿದ್ದಾರೆ ಎಂದು ಪುನ: ನ್ಯಾಯಾಲಯದ ಮೊರೆ ಹೋಗಿದ್ದರು. ಈ ವಿಚಾರದಲ್ಲಿ ಸುಪ್ರೀಂ ಕೋಟ್ ನ್ಯಾಯಾಂಗ ನಿಂದನೆ ಪ್ರಕರಣವೆಂದು ಪರಿವರ್ತಿಸಿ ಭೂ ಸ್ವಾಧೀನವಾಗಿರುವುದರಿಂದ ಪರಿಹಾರ ಕೊಡಬೇಕು ಇಲ್ಲದಿದ್ದರೆ ಜಾಗ ಬೇಕಾಗಿಲ್ಲ ಎನ್ನುವ ತೀರ್ಮಾನಕ್ಕೆ ಬನ್ನಿ ಎಂದು ಸೂಚನೆ ನೀಡಿದೆ. ಈ ಬಗ್ಗೆ ಚರ್ಚಿಸಿ ಜಾಗ ರಸ್ತೆ ಅಗಲೀಕರಣಕ್ಕೆ ಅಗತ್ಯವಿದೆ ಎಂದು ತೀರ್ಮಾನಕ್ಕೆ ಸಚಿವ ಸಂಪುಟ ಬಂದಿದೆ. ಟಿ.ಡಿ.ಆರ್ ಕೊಡಲೂ ಕೂಡ ಸಂಪುಟ ತೀರ್ಮಾನಿಸಿದೆ.

ವಿಧಾನಸೌಧ ಆವರಣದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ತೀರ್ಮಾನ

ಕನ್ನಡ ನಾಡು, ನುಡಿ ಸಂಸ್ಕೃತಿಯ ಸಂಕೇತವಾದ ತಾಯಿ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಸುಮಾರು 23 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಆದಷ್ಟು ಬೇಗ ಈ ಕಾಮಗಾರಿಯನ್ನು ಪ್ರಾರಂಭಿಸುವ ಇಚ್ಛೆಯನ್ನು ಸಂಪುಟ ವ್ಯಕ್ತಪಡಿಸಿದೆ . ಕನ್ನಡ ನಾಡು ಏಕೀಕರಣಗೊಂಡು, ಕರ್ನಾಟಕ ಎಂಬ ಹೆಸರು ನಾಮಕರಣವಾಗಿ 50 ವರ್ಷ ಸಂದಿರುವ ಸಂದರ್ಭದಲ್ಲಿ ಕನ್ನಡದ ಪ್ರತೀಕದ ಗುರುತು ಸರ್ಕಾರದ ಆವರಣದಲ್ಲಿರಬೇಕೆಂಬ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಾಗಿದೆ ಎಂದರು.

ಬೆಂಗಳೂರಿಗೆ ಮೆಟ್ರೋ 3 ನೆ ಹಂತ ಯೋಜನೆಗೆ ಆಡಳಿತಾತ್ಮಕ ಅನುಮೋದನೆ

ಬೆಂಗಳೂರಿನ ವಾಹನ ದಟ್ಟಣೆ ನಿವಾರಿಸುವ ಸೂಕ್ತ ಕ್ರಮವೆಂದರೆ ಮೆಟ್ರೋ ವ್ಯವಸ್ಥೆ. ಈಗಾಗಲೇ ಮೆಟ್ರೋ ಹಂತ 2 ಎ ಮತ್ತು 2 ಬಿ ಕಾಮಗಾರಿ ಇನ್ನೆರಡು ವರ್ಷಗಳಲ್ಲಿ ಮುಕ್ತಾಯಗೊಳ್ಳಲಿದೆ. ಭವಿಷ್ಯದ ಅವಶ್ಯಕತೆಯನ್ನು ಗಮನದಲ್ಲಿರಿಸಿ ಮೆಟ್ರೋ ರೈಲು ಹಂತ-3 ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆಯನ್ನು ನೀಡಿದ್ದು, 44.65 ಕಿ.ಮೀ ಉದ್ದದ ಎರಡು ಕಾರಿಡಾರ್ ಗಳನ್ನು ( ಕಾರಿಡಾರ್-1 ಜೆಪಿನಗರ 4 ನೇ ಹಂತದಿಂದ ಪಶ್ಚಿಮ ಹೊರವರ್ತುಲ ರಸ್ತೆಯುದ್ದಕ್ಕೂ ಕೆಂಪಾಪುರದವರೆಗೆ 32.15 ಕಿ.ಮೀ. ಹಾಗೂ ಕಾರಿಡಾರ್ -2 ಹೊಸಹಳ್ಳಿಯಿಂದ ಮಾಗಡಿ ರಸ್ತೆಯುದ್ದಕ್ಕೂ ಕಡಬಗೆರೆವರೆಗೆ 12.50 ಕಿ.ಮೀ.) ಒಟ್ಟು ಅಂದಾಜು ವೆಚ್ಚ ರೂ.15,611 ಕೋಟಿಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮೆಟ್ರೋ 3 ಹಂತಕ್ಕೆ 2028ರಲ್ಲಿ ಚಾಲನೆ ನೀಡುವ ಗುರಿಯನ್ನು ಬಿಎಂಆರ್ ಸಿ ಎಲ್ ಸಂಸ್ಥೆಯವರು ತಿಳಿಸಿದ್ದಾರೆ. ಈ ಯೋಜನೆಯ ಶೇ.85 ರಷ್ಟು ವೆಚ್ಚವನ್ನು ರಾಜ್ಯಸರ್ಕಾರವೇ ಭರಿಸಲಿದ್ದು, ಉಳಿದ ಅನುದಾನವನ್ನು ಕೇಂದ್ರ ನೀಡಲಿದೆ. ನಗರದಲ್ಲಿ ಜನರ ಓಡಾಟಕ್ಕೆ ಉತ್ತಮ ಸಂಪರ್ಕ ಒದಗಿಸುವ ದಿಸೆಯಲ್ಲಿ ಈ ನಿರ್ಣಯವನ್ನು ಸಚಿವ ಸಂಪುಟ ಕೈಗೊಂಡಿದೆ ಎಂದರು.

ಬೆಂಗಳೂರಿನ ಪೂರ್ವ ಭಾಗದಲ್ಲಿ ಟ್ರೀ ಪಾರ್ಕ್ ಸ್ಥಾಪನೆ

ಬೆಂಗಳೂರಿನ ಪೂರ್ವ ಭಾಗದವಾದ ಕೆ.ಆರ್.ಪುರ ತಾಲ್ಲೂಕಿನಲ್ಲಿ ಎನ್ ಜಿ ಇ ಎಫ್, ಬೆಂಗಳೂರು ಸಂಸ್ಥೆಯ 65 ಎಕರೆ ಜಾಗದಲ್ಲಿ ‘ಟ್ರೀ ಪಾರ್ಕ್’ ನಿರ್ಮಿಸಿ, ವಾಕಿಂಗ್ ಹಾಗೂ ಸೈಕ್ಲಿಂಗ್ ಪ್ರತ್ಯೇಕ ಟ್ರ್ಯಾಕ್, ಆಟದ ಮೈದಾನ ಸೇರಿದಂತೆ ಹಲವು ಸೌಕರ್ಯಗಳನ್ನು ಪಾರ್ಕ್ ನಲ್ಲಿ ಒದಗಿಸಲಾಗುವುದು. ಕುಟುಂಬದ ಎಲ್ಲ ವಯೋಮಾನದ ಸದಸ್ಯರು ಈ ಉತ್ತಮ ಪರಿಸರದಲ್ಲಿ ಆರೋಗ್ಯಕರ ಸಮಯ ಕಳೆಯಲು ಅನುಕೂಲವಾಗುವಂತೆ ಲಾಲ್ ಬಾಗ್ , ಕಬ್ಬನ್ ಪಾರ್ಕ್ ರೀತಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಭಿವೃದ್ಧಿಪಡಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ಕೋಟ್ಯಾಂತರ ರೂ.ಗಳ ಬೆಲೆ ಬಾಳುವ ಜಮೀನನ್ನು ಯಾವುದೇ ಕೈಗಾರಿಕೆಗಳಿಗೆ ನೀಡದೇ , ಸಾರ್ವಜನಿಕರ ಬಳಕೆಗಾಗಿ ಟ್ರೀ ಪಾರ್ಕ್ ನ್ನು ಅಂದಾಜು ವೆಚ್ಚ 11 ಕೋಟಿ ರೂಗಳಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ.

ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿನ 7 ಜಿಲ್ಲೆಗಳಲ್ಲಿ ಹೊಸದಾಗಿ 33 ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು 132 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ.

ಆಗ್ರಿ ಇನ್ನೋವೇಷನ್ ಸೆಂಟರ್

ಕೃಷಿ ಕ್ಷೇತ್ರದಲ್ಲಿ ರೈತರ ಉತ್ಪಾದನೆ ಹೆಚ್ಚಾಗಲು ಹೊಸ ತಂತ್ರಜ್ಞಾನ ತರಲು ನವೋದ್ಯಮವನ್ನು ಪ್ರೋತ್ಸಾಹಿಸಬೇಕು. ಅಗ್ರೀ ಬಯೋ ಟೆಕ್ ಸಂಸ್ಥೆಗಳನ್ನು ರೈತರಿಗೆ ತಲುಪಿಸಲು , ಉತ್ಪಾದಕತೆ ಹೆಚ್ಚಿಸಲು, ಬೆಳೆ ಸಂರಕ್ಷಣೆಗಾಗಿ ಹೊಸ ನವೋದ್ಯಮಗಳನ್ನು ಪ್ರೋತ್ಸಾಹಿಸಲು ‘ಆಗ್ರಿ ಇನ್ನೋವೇಷನ್ ಸೆಂಟರ್ ನ್ನು ‘ 67.50 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲು ಜೈವಿಕ ತಂತ್ರಜ್ಞಾನ ಇಲಾಖೆ ವತಿಯಿಂದ ಇದನ್ನು ಸ್ಥಾಪಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಪೋಲೀಸ್ ನೇಕಾತಿ ಹಗರಣ: ಹೆಚ್ಚಿನ ತನಿಖೆಗೆ ಎಸ್.ಐ.ಟಿ. ರಚನೆ

ಪೋಲೀಸ್ ನೇಮಕಾತಿ ಹಗರಣದ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳು ಬಿ.ವೀರಪ್ಪ ಅವರ ನೇತೃತ್ವದ ಸಮಿತಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ಸರ್ಕಾರಿ ನೌಕರರೂ ಸೇರಿ ಖಾಸಗಿಯವರು, ಮಧ್ಯವರ್ತಿಗಳು ಸೇರಿ 113 ಜನರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಸಿಐಡಿಯವರು 17 ಪ್ರಕರಣಗಳ ತನಿಖೆಯನ್ನು ಮಾಡುತ್ತಿದ್ದಾರೆ. ಆಯೋಗದ ಮುಂದೆ ಕೆಲವರು ಮಾಹಿತಿ ನೀಡಿಲ್ಲ. ಅಂಥವರ ಬಳಿ ಮಾಹಿತಿಯನ್ನು ಇತರೆ ತನಿಖೆ ಮೂಲಕ ಪಡೆಯಬೇಕಿದ್ದು, ತಪ್ಪುಗಳಾಗಿರುವ ಬಗ್ಗೆ ಇನ್ನಷ್ಟು ತನಿಖೆ ಕೈಗೊಳ್ಳಲು ಎಸ್.ಐ.ಟಿಗೆ ವಹಿಸಬೇಕೆಂಬ ನ್ಯಾಯಮೂರ್ತಿಗಳ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಎಸ್.ಐ.ಟಿ ರಚನೆಗೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ.



Join Whatsapp