ಬೆಂಗಳೂರು: ಯಡಿಯೂರಪ್ಪ ಶೋಭಾಳಿಗೆ ಟಿಕೆಟ್ ಕೇಳಿದಷ್ಟು ನನ್ನ ಮಗನಿಗೆ ಕೇಳಲಿಲ್ಲ ಎಂದ ಈಶ್ವರಪ್ಪ, ಮಾತಿನುದ್ದಕ್ಕೂ ಶೋಭಾ ಕರಂದ್ಲಾಜೆ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಘಟನೆ ನಡೆದಿದೆ.
ರಾಜಧಾನಿಯಿಂದ ಶಿವಮೊಗ್ಗಕ್ಕೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಕೆಎಸ್ ಈಶ್ವರಪ್ಪ ಮತ್ತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸದಾನಂದಗೌಡರಿಗೆ ಟಿಕೆಟ್ ತಪ್ಪಿಸಿ ಶೋಭಾಳನ್ನು ಯಾಕೆ ಕರೆದುಕೊಂಡು ಬಂದು ಹಾಕಿದ್ರು? ಜನರಿಗೆ ಬೇಡವಾದವಳು ಅವಳು ಎಂದು ಈಶ್ವರಪ್ಪ ಹೇಳಿದ್ದಾರೆ.
ಯಡಿಯೂರಪ್ಪ ಇದುವರೆಗೂ ನನ್ನ ಜೊತೆಗೆ ಮಾತಾಡಿಲ್ಲ. ಎಎಂಲ್ಸಿ ನೀಡುವ ಬಗ್ಗೆಯೂ ಪ್ರಸ್ತಾಪನೂ ಮಾಡಿಲ್ಲ. ಯಡಿಯೂರಪ್ಪ ಮಾತು ಕೇಳಿ ನನ್ನ ಮಗ ಮೋಸ ಹೋದ. ಟಿಕೆಟ್ ಕೊಡದೇ ಮೋಸ ಮಾಡಿದರು ಎಂದು ಆಕ್ರೋಶ ಹೊರ ಹಾಕಿದರು.
ನನ್ನನ್ನು ಮಂತ್ರಿ ಮಾಡಿಲ್ಲ ಯಾಕೆ?
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿದ ಕೂಡಲೇ ಮಂತ್ರಿ ಮಾಡ್ತೀನಿ ಎಂದು ಹೇಳಿದ್ದರು. ಆದರೆ ಆರೋಪಮುಕ್ತನಾದ ನನ್ನನ್ನು ಮಂತ್ರಿ ಮಾಡಿಲ್ಲ ಯಾಕೆ? ಉಡುಪಿ-ಚಿಕ್ಕಮಗಳೂರನಿಂದ ಬೆಂಗಳೂರು ಉತ್ತರಕ್ಕೆ ಶೋಭಾ ಕರಂದ್ಲಾಜೆ ಅವರನ್ನು ಯಾಕೆ ಕರೆದುಕೊಂಡು ಬಂದರು ಎಂದು ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ಪಕ್ಷ ಅಪ್ಪ-ಮಕ್ಕಳ ಹಿಡಿತದಲ್ಲಿದೆ
ಯಡಿಯೂರಪ್ಪನವರು ಅಮಿತ್ ಶಾ ಬಳಿ ಹೋಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬೇಡ ಅಂತಾ ಹೇಳಿದರು. ಇದೆಲ್ಲದರ ಬಗ್ಗೆ ನಾನು ನಾಳೆಯ ಸಭೆಯಲ್ಲಿ ತಿಳಿಸುತ್ತೇನೆ. ಇಷ್ಟು ದೊಡ್ಡ ಸಂಘಟನೆಯನ್ನು ಅಪ್ಪ ಮಕ್ಕಳು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.