ಇಸ್ಲಮಾಬಾದ್: ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಆಲಿ ಝರ್ದಾರಿ ತನ್ನ ಪುತ್ರಿ ಅಸೀಫಾ ಭುಟ್ಟೋರನ್ನು ದೇಶದ ಪ್ರಥಮ ಮಹಿಳೆಯೆಂದು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ.
ಸಾಮಾನ್ಯವಾಗಿ ಈ ಸ್ಥಾನಮಾನ ಅಧ್ಯಕ್ಷರ ಪತ್ನಿಗೆ ಸಲ್ಲುತ್ತದೆ. ಆದರೆ ಇದೇ ಮೊದಲ ಬಾರಿಗೆ ಈ ಸ್ಥಾನ ಅಧ್ಯಕ್ಷರ ಪುತ್ರಿಗೆ ಸಲ್ಲಲಿದೆ. ಝರ್ದಾರಿಯವರ ಪತ್ನಿ ಮಾಜಿ ಪ್ರಧಾನಿ ಬೆನಝೀರ್ ಭುಟ್ಟೋ 2007ರಲ್ಲಿ ಗುಂಡೇಟಿಗೆ ಪ್ರಾಣ ಕಳಕೊಂಡಿದ್ದಾರೆ. ಆದ್ದರಿಂದ ಅಧ್ಯಕ್ಷರ ಪುತ್ರಿ ಆಸಿಫಾ ಭುಟ್ಟೋಗೆ ಈ ಸ್ಥಾನಮಾನ ದೊರೆಯಲಿದೆ
ಈ ಕುರಿತ ಅಧಿಕೃತ ಘೋಷಣೆಯ ಬಳಿಕ ಆಸಿಫಾ ಭುಟ್ಟೋಗೆ ಪ್ರಥಮ ಮಹಿಳೆಗೆ ಸಲ್ಲುವ ಗೌರವ, ಶಿಷ್ಟಾಚಾರ ಮತ್ತು ಸವಲತ್ತುಗಳು ದೊರಕಲಿವೆ.
ಆದಿತ್ಯವಾರ ಪಾಕಿಸ್ತಾನ್ ಪೀಪಲ್ಸ್ ಪಕ್ಷದ ಸಹ ಅಧ್ಯಕ್ಷ ಆಸಿಫ್ ಝರ್ದಾರಿ ದೇಶದ 14ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.