ಬಿಜೆಪಿಗೆ ಸವಾಲುಗಳು ಎದುರಾದಾಗಲೆಲ್ಲಾ “ಪಾಕಿಸ್ತಾನ್ ಜಿಂದಾಬಾದ್” ಸದ್ದು ಮಾಡುತ್ತದೆ: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ನಾಸೀರ್ ಹುಸೇನ್ ಗೆಲುವು ಸಾಧಿಸಿದ ಬಳಿಕ ಬೆಂಬಲಿಗರು ವಿಧಾನಸೌಧದ ಆವರಣದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂಬ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಉತ್ತರ ನೀಡಿದ್ದಾರೆ. ದೇಶದಲ್ಲಿ ಬಿಜೆಪಿ ಸವಾಲುಗಳನ್ನು ಎದುರಿಸುವ ಸಂದರ್ಭ ಬಂದಾಗಲೆಲ್ಲ ಈ “ಪಾಕಿಸ್ತಾನ್ ಜಿಂದಾಬಾದ್” ಎನ್ನುವ ಶಬ್ದ ಸದ್ದು ಮಾಡುತ್ತದೆ ಎಂದಿದ್ದಾರೆ.

- Advertisement -

ವಿಜಯೋತ್ಸವ ಆಚರಣೆಯ ವೇಳೆ ಅಲ್ಲಿ ಉಪಸ್ಥಿತರಿದ್ದ ಒಂದಷ್ಟು ಮಾಧ್ಯಮ ಸ್ನೇಹಿತರು ಅಲ್ಲಿ “ನಾಸಿರ್ ಸಾಬ್ ಜಿಂದಾಬಾದ್” ಎಂದು ಕೂಗಿರುವುದಾಗಿ ಹೇಳಿದ್ದಾರೆ ಎಂದ ಖರ್ಗೆ, ಪಾಕಿಸ್ತಾನ್ ಜಿಂದಾಬಾದ್ ಕೂಗಲಾಗಿದೆ ಎನ್ನುವ ಮಾಧ್ಯಮಗಳಿಗೆ ಹಲವು ಪ್ರಶ್ನೆಗಳನ್ನು ಕೂಡ ಕೇಳಿದ್ದಾರೆ.

ಅಕಸ್ಮಾತ್ ಅಲ್ಲಿ “ಪಾಕಿಸ್ತಾನ್” ಎಂದೇ ಕೂಗಿದ್ದರೆ ಎಲ್ಲರಿಗೂ ಒಂದೇ ರೀತಿ ಕೇಳಿಸಿರಬೇಕಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ. ಅಕಸ್ಮಾತ್ ಆತ ನಿಜಕ್ಕೂ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರೆ ಸಹಜವಾಗಿ ಪತ್ರಕರ್ತರ ಪ್ರಜ್ಞೆ ಜಾಗೃತವಾಗಿ ಆತನತ್ತ ಗಮನ ಹರಿಸುತ್ತಿದ್ದರು, ಆತನತ್ತ ಕ್ಯಾಮರಾ ತಿರುಗಿಸುತ್ತಿದ್ದರು, ಆತನ ಮೇಲೆ ಮುಗಿಬೀಳುತ್ತಿದ್ದರು.ಆದರೆ ಇಲ್ಲಿ ಪತ್ರಕರ್ತರು ಆತನತ್ತ ಕಿಂಚಿತ್ತೂ ಗಮನಿಸುವುದಿಲ್ಲ ಎಂದು ಹೇಳಿದ್ದಾರೆ.

- Advertisement -

ಆತ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದೇ ಆಗಿದ್ದರೆ ಅಲ್ಲಿ ನೆರೆದಿದ್ದವರು ಖಂಡಿತಾ ಸುಮ್ಮನಿರುತ್ತಿರಲಿಲ್ಲ, ಕೂಡಲೇ ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಿದ್ದರು. ಪತ್ರಕರ್ತರೂ ಸೇರಿದಂತೆ ಅಲ್ಲಿ ನೆರೆದಿದ್ದವರ ಮ್ಯಾನರಿಸಂನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.ಅಕಸ್ಮಾತ್ ಆ ವ್ಯಕ್ತಿ ಹಾಗೆ ಘೋಷಣೆ ಕೂಗಿದ್ದಿದ್ದರೆ ಅಲ್ಲಿನ ಪತ್ರಕರ್ತರ “ದೇಶಭಕ್ತಿ” ಜಾಗೃತವಾಗದೆ ಸಹಜವಾಗಿದ್ದಿದ್ದೇಕೆ? ಏನೂ ನಡೆದೇ ಇಲ್ಲ ಎನ್ನುವಂತೆ ನಡೆದುಕೊಂಡಿದ್ದೇಕೆ? ಎಂದು ಪತ್ರಕರ್ತರನ್ನು ಪ್ರಶ್ನೆ ಮಾಡಿದ್ದಾರೆ.



Join Whatsapp