ಬೆಂಗಳೂರು:ಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಾಸೀರ್ ಹುಸೇನ್ ಗೆಲುವು ಸಾಧಿಸಿದ ಬಳಿಕ ಬೆಂಬಲಿಗರು ವಿಧಾನಸೌಧದ ಆವರಣದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಬಿಜೆಪಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ ನಾಯಕರು ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವ ಎಚ್ಚರಿಕೆ ನೀಡಿದೆ. ಈ ಸಂಬಂಧ ನಾಸೀರ್ ಹುಸೇನ್ ಪ್ರತಿಕ್ರಯಿಸಿದ್ದಾರೆ.
ಇಲ್ಲಿ ಸ್ಪಷ್ಟನೆ ಕೊಡುವಂತಹದ್ದು ಏನೂ ಇಲ್ಲಅಲ್ಲಿ ಕೇವಲ ನಾಸೀರ್ ಸಾಬ್ ಜಿಂದಾಬಾದ್ ಎಂದು ಘೋಷಣೆ ಕೂಗಲಾಗುತ್ತಿತ್ತು. ನಾನು ಅಲ್ಲಿದ್ದಾಗ ಆ ತರಹದ ಘೋಷಣೆಗಳನ್ನು ನಾನೇನು ಕೇಳಿಲ್ಲ ಎಂದು ನೂತನ ರಾಜ್ಯಸಭಾ ಸಂಸದ ನಾಸೀರ್ ಹುಸೇನ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಅಲ್ಲಿರುವಾಗ ಅಂತಹ ಘೋಷಣೆಗಳು ನನಗೆ ಕೇಳಿಲ್ಲ. ನಾನು ಹೋದ್ಮೇಲೆ ಯಾರಾದ್ರೂ ಕೂಗಿದ್ದಾರೆಯೇ ಏನು ಎಂಬುವುದು ನನಗೆ ಗೊತ್ತಿಲ್ಲ. ನಾನು ಸಹ ವಿಡಿಯೋಗಳನ್ನು ನೋಡಿದ್ದೇನೆ.ಅದರಲ್ಲಿ ನಾಸಿರ್ ಸಾಬ್ ಜಿಂದಾಬಾದ್ ಎಂದು ಇದೆ. ಒಂದು ವೇಳೆ ಅಲ್ಲಿ ಯಾರಾದರೂ ಆ ರೀತಿ ಘೋಷಣೆ ಕೂಗಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಈ ಪ್ರಕರಣ ಸಂಬಂಧ ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಯಬೇಕು. ಯಾರು ಎಲ್ಲಿಂದ ಬಂದರು? ಇದರ ಹಿಂದೆ ಏನಿದೆ ಎಂಬುದರ ಬಗ್ಗೆಯೂ ತನಿಖೆ ನಡೆಯಬೇಕು ಎಂದೂ ಅವರಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.