ಮಂಗಳೂರು: ದೇಹಕ್ಕಾದ ಗಾಯಗಳು ಸುಮ್ಮನಿದ್ರೂ ವಾಸಿಯಾಗುತ್ತೆ. ಆದರೆ ದೇಶಕ್ಕಾದ ಗಾಯ ನಾವು ಸುಮ್ಮನಿದ್ದಷ್ಟು ಹೆಚ್ಚಾಗುತ್ತದೆ. ನಮ್ಮ ದೇಶದಲ್ಲಿ ಎಂತಹ ನಾಯಕನಿದ್ದಾನೆ, ದೇಶವನ್ನು ಹೇಗೆ ಮಂಗ ಮಾಡ್ತಿದ್ದಾನೆ ಎಂದರೆ, 2019ರಲ್ಲಿ ಗುಹೆ ಸೇರಿಕೊಂಡ, ಈಗ ಕ್ಯಾಮೆರಾ ಹಿಡಿದುಕೊಂಡು ನೀರೊಳಗೆ ಸೇರಿದ್ದಾನೆ. ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ. ದಿನಕ್ಕೆ ಐದು ಕಾಸ್ಟ್ಯೂಮ್ ಚೇಂಜ್ ಮಾಡ್ತಾನೆ. ಕರ್ಕಶವಾದ ಲೌಡ್ ಸ್ಪೀಕರ್ ಆತ ಎಂದು ಪ್ರಧಾನಿ ಮೋದಿ ವಿರುದ್ಧ ಚಿತ್ರ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನ ತೊಕ್ಕೋಟುನಲ್ಲಿ ನಡೆದ DYFI ನ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದಿವೆ. ಹಿಂದೆ ಸ್ವಾತಂತ್ರ್ಯಕ್ಕಾಗಿ ಉಪವಾಸ ಮಾಡುವ ನಾಯಕರಿದ್ದರು. ಆದರೆ ಈಗ ದೇವಸ್ಥಾನದ ಉದ್ಘಾಟನೆಗೆ ಉಪವಾಸ ಮಾಡುವ ನಾಯಕರಿದ್ದಾರೆ ಎಂದು ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈತ ವಂದೇ ಭಾರತ್‌ಗೆ ಬಾವುಟ ತೋರಿಸಿದಷ್ಟು ಸ್ಟೇಷನ್ ಮಾಸ್ಟರ್ ಸಹ ಬಾವುಟ ತೋರಿಸಿರಲಿಕ್ಕಿಲ್ಲ. ಬಿಜೆಪಿ ಮತ್ತು ಆರೆಸ್ಸೆಸ್ ನಂತಹ ಕಿಡ್ನಾಪಿಂಗ್ ಟೀಮ್ ಈ ದೇಶದಲ್ಲಿ ಬೇರೆ ಯಾವುದು ಇಲ್ಲ. ಮಾತೆತ್ತಿದರೆ ರಾಮಮಂದಿರ, ಮಸೀದಿ, ಹಿಂದೂ ಧರ್ಮ ಅಂತಾರೆ. ಎಷ್ಟು ಅಂತಾ ಅಗೆಯುತ್ತಾ ಹೋಗ್ತಿರಾ? ಮುಂದೆ ಹರಪ್ಪ, ಮೊಹೆಂಜಾದೂರು ಸಿಗಬಹುದು. ಹಾಗಾದ್ರೆ ಮತ್ತೆ ಶಿಲಾಯುಗಕ್ಕೆ ಹೋಗ್ತೀರಾ? ಎಂದು ಪ್ರಕಾಶ್ ರೈ ಲೇವಡಿ ಮಾಡಿದರು