ಗಂಗಾವತಿ: ಆಟವಾಡುತ್ತಿದ್ದ ಹೆಣ್ಣು ಮಗುವೊಂದು ಚರಂಡಿಗೆ ಬಿದ್ದು ಸಾವನ್ನಪ್ಪಿದ ಹೃದಯ ವಿದ್ರಾವಕ ಪ್ರಕರಣ ನಗರದ ಎಪಿಎಂಸಿ ಹಮಾಲರ ಕ್ವಾಟ್ರಸ್ ನಲ್ಲಿ ಮಧ್ಯಾಹ್ನ ನಡೆದಿದೆ.
ಹಮಾಲರ ಕ್ವಾಟ್ರಸ್‌ನ ಪವಿತ್ರ ತಾಯಿ ಅಕ್ಕಮ್ಮ ಮೃತ ಮಗು. ಮನೆ ಹತ್ತಿರ ಆಟವಾಡುತ್ತಿರುವಾಗ ಚರಂಡಿಗೆ ಬಿದ್ದಿದೆ. ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಮಗು ಕಾಣೆಯಾಗಿರುವ ಕುರಿತು ಗಮನಕ್ಕೆ ಬಂದ ತಕ್ಷಣ ಇಡೀ ಕ್ವಾಟ್ರಸ್ ಹುಡಿಕಾಡಿದ್ದಾರೆ. ಕೊನೆಗೆ ಚರಂಡಿಗಳಲ್ಲಿ ಹುಡಿಕಿದಾಗ ಮಗುವಿನ ಶವ ಚರಂಡಿಯಲ್ಲಿ ಪತ್ತೆಯಾಗಿದೆ.
ಪ್ರತಿಭಟನೆ: ಚರಂಡಿಯನ್ನು ಹಲವು ದಿನಗಳಿಂದ ಸ್ವಚ್ಛ ಮಾಡದೇ ಇರುವ ಕಾರಣ ಹಮಾಲರ ಕ್ವಾಟ್ರಸ್ ಚರಂಡಿಗಳು ತುಂಬಿದ್ದು ಮಗುವಿನ ಸಾವಿಗೆ ನಗರಸಭೆ ಕಾರಣವಾಗಿದೆ ಎಂದು ಆರೋಪಿಸಿ ಮಗುವಿನ ಕುಟುಂಬದವರು ಹಾಗೂ ಸ್ಥಳೀಯರು ನಗರಸಭೆ ಶವದೊಂದಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.
ಪೌರಾಯುಕ್ತ ವಿರೂಪಾಕ್ಷಮೂರ್ತಿ ಸ್ಥಳಕ್ಕೆ ಆಗಮಿಸಿ ಎಪಿಎಂಸಿ ಹಮಾಲರ ಕ್ವಾಟ್ರಸ್ ಪ್ರದೇಶ ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ. ಎಪಿಎಂಸಿಯವರೇ ಚರಂಡಿ ಸ್ವಚ್ಛ ಮಾಡಿಸಬೇಕಿತ್ತು ಎಂದು ಎಪಿಎಂಸಿ ಕಾರ್ಯದರ್ಶಿ ಎಚ್.ಪತ್ತಾರ ಅವರನ್ನು ಕರೆಸಿಕೊಂಡು ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ಎಪಿಎಂಸಿ ಹಾಗೂ ನಗರಸಭೆ ಅಧಿಕಾರಿಗಳು ವೈಯಕ್ತಿಕವಾಗಿ 30 ಸಾವಿರ ರೂ.ಗಳ ಪರಿಹಾರ ನೀಡಿದ್ದಾರೆ.