ಕರ್ನಾಟಕ ಸೇರಿದಂತೆ ಭಾರತದ 12 ಯುವಕರನ್ನು ರಷ್ಯಾ ಯುದ್ಧಕ್ಕೆ ಕಳುಹಿಸಿದೆ: ಉವೈಸಿ

Prasthutha|

ಹೈದರಾಬಾದ್: ಉಕ್ರೇನ್‌ನೊಂದಿಗೆ ಯುದ್ಧದಲ್ಲಿ ನಿರತವಾಗಿರುವ ರಷ್ಯಾ ಉದ್ಯೋಗಕ್ಕಾಗಿ ದೇಶಕ್ಕೆ ಬಂದ ಭಾರತೀಯ ಯುವಕರನ್ನು ಯುದ್ಧ ಮಾಡಲು ಉಕ್ರೇನ್‌ಗೆ ಕಳುಹಿಸಿದೆ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

- Advertisement -

ಉದ್ಯೋಗ ಭರವಸೆಯೊಂದಿಗೆ ಏಜೆಂಟರ ವಂಚನೆಗೆ ಒಳಗಾಗಿ ರಷ್ಯಾಗೆ ತೆರಳಿದ್ದ 12 ಭಾರತೀಯ ಯುವಕರನ್ನು ಯುದ್ಧ ಮಾಡಲು ಉಕ್ರೇನ್‌‌ಗೆ ಕಳುಹಿಸಲಾಗಿದ್ದು, ಇವರನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರಬೇಕು ಎಂದು ಕೇಂದ್ರ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.

ಯುದ್ಧಕ್ಕೆ ಕಳುಹಿಸಲಾದವರಲ್ಲಿ ಕರ್ನಾಟಕ, ತೆಲಂಗಾಣ, ಗುಜರಾತ್, ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರ ಪ್ರದೇಶದ ಯುವಕರು ಸೇರಿದ್ದಾರೆ. ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಗಂಭೀರವಾಗಿ ಪರಿಗಣಿಸಿ, ರಷ್ಯಾದೊಂದಿಗೆ ಮಾತುಕತೆ ನಡೆಸಿ, ಯುವಕರನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸಬೇಕು ಎಂದು ಉವೈಸಿ ಆಗ್ರಹಿಸಿದ್ದಾರೆ.

- Advertisement -

ಈ ಯುವಕರು ಕಳೆದ ಡಿಸೆಂಬರ್‌ನಲ್ಲಿ ರಷ್ಯಾಗೆ ತೆರಳಿದ್ದರು. ಇವರಿಗೆ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿ ಕೆಲಸ ನೀಡುವುದಾಗಿ ಹೇಳಲಾಗಿತ್ತು ಎಂದು ಏಜೆಂಟರು ಹೇಳಿದ್ದಾರೆ. ಈ ಕುರಿತಂತೆ ವಿದೇಶಾಂಗ ಸಚಿವರಿಗೆ ಹಾಗೂ ರಷ್ಯಾದಲ್ಲಿರುವ ಭಾರತೀಯ ರಾಯಭಾರಿಗೆ ಪತ್ರ ಬರೆಯಲಾಗಿದೆ ಎಂದಿದ್ದಾರೆ.

‘ಈ ಯುವಕರನ್ನು ರಷ್ಯಾಗೆ ಕಳುಹಿಸಿದ ಮೂವರು ಏಜೆಂಟರಲ್ಲಿ ಒಬ್ಬ ದುಬೈನಲ್ಲಿ ಇನ್ನಿಬ್ಬರು ಮುಂಬೈನಲ್ಲಿದ್ದಾರೆ. ಉದ್ಯೋಗದ ಆಮಿಷವೊಡ್ಡುವ ಏಜೆಂಟರು ಅಮಾಯಕ ಯುವಕರನ್ನು ರಷ್ಯಾಗೆ ಕಳುಹಿಸಿ ಅಲ್ಲಿ ಸೇನೆಗೆ ಸೇರುವಂತೆ ಮಾಡುತ್ತಿದ್ದಾರೆ. ಇಂಥ ದೊಡ್ಡ ಜಾಲವೇ ಇದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಿ, ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಸಾದುದ್ದೀನ್ ಉವೈಸಿ ಒತ್ತಾಯಿಸಿದ್ದಾರೆ.



Join Whatsapp