ಮಂಗಳೂರು: ಶೇ 2 ರಷ್ಟು ಇರುವ ಕ್ರೈಸ್ತರನ್ನು ಪದೇ ಪದೇ ಟಾರ್ಗೆಟ್ ಮಾಡುವ ಶಾಸಕ ಭರತ್ ಶೆಟ್ಟಿ ಶಿಕ್ಷಣ ಕ್ಷೇತ್ರದಲ್ಲಿ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಉತ್ತರಿಸಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿರುವ ಅವರು, ಮಂಗಳೂರಿನ ಜೆರೋಸಾ ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಇಡೀ ಕ್ರೈಸ್ತ ಮಿಷಿನರಿ ಶಾಲೆಗಳನ್ನು ಬಹಿಷ್ಕರಿಸುವಂತೆ ಶಾಸಕ ಭರತ್ ಶೆಟ್ಟಿ ಅವರು ನೀಡಿರುವ ಹೇಳಿಕೆ ಹಾಗೂ ಶಾಲೆಗೆ ಮುತ್ತಿಗೆ ಹಾಕಿರುವ ವೇದವ್ಯಾಸ ಕಾಮತ್ ಅವರ ನಡೆ ಅಮಾನವೀಯ ಹಾಗೂ ನಾಚಿಕೆಗೇಡಿನ ಸಂಗತಿ. ಕರ್ನಾಟಕ ಅಷ್ಟೇ ಅಲ್ಲ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತ ಮಿಶನರಿಗಳು ನೀಡಿರುವ ಕೊಡುಗೆಗಳು ಅಪಾರ. ಚುನಾಯಿತ ಶಾಸಕರಾಗಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಕ್ರಮಕೈಗೊಳ್ಳುವ ಅಧಿಕಾರ ಶಾಸಕರಿಗಿದೆ. ಅದನ್ನು ಬಿಟ್ಟು ಶಾಲೆಗೆ ನುಗ್ಗುವುದು, ಮುಗ್ಧ ಮಕ್ಕಳನ್ನು ಪ್ರಚೋದಿಸುವುದು ಜವಾಬ್ದಾರಿಯುತ ಶಾಸಕ ಪರಂಪರೆಗೇ ಅವಮಾನ ಎಂದರು.
ಮಕ್ಕಳ ಭವಿಷ್ಯವನ್ನೇ ಬದಿಗೊತ್ತಿ ಚುನಾಯಿತ ಪ್ರತಿನಿಧಿಯೊಬ್ಬರು ಈ ರೀತಿ ಕೋಮು ಪ್ರಚೋದನೀಯ ಹೇಳಿಕೆ ನೀಡುವುದು ಖಂಡನೀಯ. ಪ್ರಜಾತಂತ್ರ ವ್ಯವಸ್ಥೆ ಮೂಲಕ ಆರಿಸಿಬಂದ ಶಾಸಕರು ಕಾನೂನನ್ನು ಕೈಗೆತ್ತಿಕೊಳ್ಳುವುದು ನಾಗರಿಕ ಸಮಾಜ ಒಪ್ಪುವ ನಡೆಯಲ್ಲ ಎಂದರು.