ತಿರುವನಂತಪುರ: ಆರ್ಥಿಕ ವಿಚಾರಗಳಲ್ಲಿ ಕೇಂದ್ರ ಸರ್ಕಾರವು ದಕ್ಷಿಣ ಭಾರತದ ರಾಜ್ಯಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಅಸಮಾಧಾನಗೊಂಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತಾರೂಢ ಎಲ್ಡಿಎಫ್ ಗುರುವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ನೀಡಿದ್ದ ಆಹ್ವಾನವನ್ನು ಕಾಂಗ್ರೆಸ್ ನೇತೃತ್ವದ ಯುಡಿಎಫ್ ತಿರಸ್ಕರಿಸಿದರೆ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ರಾಜ್ಯದ ಎಲ್ಲ ಆರ್ಥಿಕ ಸಮಸ್ಯೆಗಳಿಗೆ ಕೇಂದ್ರವನ್ನು ದೂಷಿಸುವ ಎಡಪಕ್ಷದ ಧೋರಣೆ ಸರಿಯಲ್ಲ ಎಂದು ಹೇಳಿರುವ ಯುಡಿಎಫ್, ಪ್ರತಿಭಟನೆಯಲ್ಲಿ ಭಾಗವಹಿಸಲು ನಿರಾಕರಿಸಿದೆ.
ಕೇರಳದ ಆಡಳಿತಾರೂಢ ಎಲ್ಡಿಎಫ್ನ ಸಚಿವರು, ಶಾಸಕರು ಮತ್ತು ಸಂಸದರು ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಎಲ್ಲ ರಾಜ್ಯಗಳ ಸಾಂವಿಧಾನಿಕ ಹಕ್ಕುಗಳನ್ನು ಕಾಪಾಡುವ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯಗಳಿಗೆ ನ್ಯಾಯಯುತವಾಗಿ ದೊರೆಯಬೇಕಾದ ಪಾಲನ್ನು ಕೇಳುವುದು ಪ್ರತಿಭಟನೆಯ ಉದ್ದೇಶವಾಗಿದೆ ಎಂದು ವಿಜಯನ್ ಹೇಳಿದ್ದಾರೆ.
ಹಣಕಾಸಿನ ಸಂಯುಕ್ತ ವ್ಯವಸ್ಥೆಯ ರಕ್ಷಣೆಗಾಗಿ ನಡೆಯುವ ಈ ಪ್ರತಿಭಟನೆಗೆ ತಮ್ಮ ಬೆಂಬಲ ಇದೆ’ ಎಂದು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.
ಕೇರಳದ ಆರ್ಥಿಕ ಸಂಕಷ್ಟಕ್ಕೆ ರಾಜ್ಯ ಸರ್ಕಾರದ ದುರುಪಯೋಗವೇ ಮುಖ್ಯ ಕಾರಣ. ತೆರಿಗೆ ಸಂಗ್ರಹ, ಚಿನ್ನದ ಮಾರಾಟ, ಐಜಿಎಸ್ಟಿಯಲ್ಲಿ ತನ್ನ ಪಾಲು ಸ್ವೀಕಾರ ಸೇರಿದಂತೆ ಹಲವು ವಿಷಯಗಳಲ್ಲಿ ರಾಜ್ಯ ಸರ್ಕಾರದ ಲೋಪಗಳಿಂದ ಆರ್ಥಿಕವಾಗಿ ಕೆಟ್ಟ ಪರಿಸ್ಥಿತಿ ಎದುರಾಗಿದೆ ಎಂದು ಯುಡಿಎಫ್ ದೂರಿದೆ.
ಈ ಆಂದೋಲನವು ಕೇರಳದಷ್ಟೇ ಅಲ್ಲ, ಎಲ್ಲಾ ರಾಜ್ಯಗಳ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ, ಈ ಹೋರಾಟದ ಗುರಿ ಯಾರ ಮೇಲೂ ಜಯ ಸಾಧಿಸುವುದಲ್ಲ, ಶರಣಾಗುವ ಬದಲು ನಮಗೆ ನ್ಯಾಯಯುತವಾಗಿ ಅರ್ಹವಾದದ್ದನ್ನು ಪಡೆಯುವುದು. ಈ ಪ್ರತಿಭಟನೆಗೆ ಬೆಂಬಲವಾಗಿ ಇಡೀ ದೇಶ ಕೇರಳದೊಂದಿಗೆ ನಿಲ್ಲುತ್ತದೆ ಎನ್ನುವುದು ನಮ್ಮ ನಂಬಿಕೆ ಎಂದು ಕೇರಳ ಸಿಎಂ ಪಿಣಯಾಯಿ ವಿಜಯನ್ ವಿಶ್ವಾಸ ವ್ಯಕ್ತಪಡಿಸಿದರು.