ಮಳಲಿ ಮಸೀದಿ ವಿವಾದ: ಪ್ರಕರಣಕ್ಕೆ ವಕ್ಫ್ ಬೋರ್ಡ್ ಎಂಟ್ರಿ

Prasthutha|

►ಮಂಗಳೂರು ನ್ಯಾಯಾಲಯದಲ್ಲಿ ದಾವೆ ಸಲ್ಲಿಸಲು ದ.ಕ ಜಿಲ್ಲಾ ವಕ್ಫ್ ಸಮಿತಿ ನಿರ್ಧಾರ

- Advertisement -

ಮಂಗಳೂರು: ಮಳಲಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಕ್ಫ್ ಬೋರ್ಡ್ ಕಡೆಯಿಂದ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ತಿಳಿಸಿದ್ದಾರೆ.


ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈವರೆಗೆ ಕೇವಲ ಮಳಲಿ ಮಸೀದಿ ಆಡಳಿತ ಸಮಿತಿಯವರು ಕಾನೂನು ಹೋರಾಟ ನಡೆಸುತ್ತಿದ್ದರು, ಮುಂದಕ್ಕೆ ವಕ್ಫ್ ಬೋರ್ಡ್ ಕಡೆಯಿಂದಲೂ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

- Advertisement -


ಮಂಗಳೂರಿನ ಕೆಳಹಂತದ ನ್ಯಾಯಲಯದ ವಿಚಾರಣೆಗೆ ತಡೆಕೋರಿ ಮಳಲಿ ಮಸೀದಿ ಆಡಳಿತ ಸಮಿತಿ ಹೈಕೋರ್ಟ್ ಮೆಟ್ಟಿಲೇರಿತ್ತು. ಮಳಲಿ ಮಸೀದಿ ವಕ್ಫ್‌‌ ಗೆ ಒಳಪಟ್ಟಿರುವುದರಿಂದ ವಕ್ಫ್ ಟ್ರಿಬ್ಯುನಲ್ ನಲ್ಲಿ ವಿಚಾರಣೆ ನಡೆಸುವಂತೆ ಮಳಲಿ ಮಸೀದಿ ಆಡಳಿತ ಸಮಿತಿ ಮನವಿ ಮಾಡಿತ್ತು. ಆದರೆ ಹೈಕೋರ್ಟ್ ನಲ್ಲಿ ಮಳಲಿ ಮಸೀದಿಯ ಮೇಲ್ಮನವಿ ಅರ್ಜಿ ವಜಾ ಆಗಿದ್ದು, ಕೆಳಹಂತದ ನ್ಯಾಯಲಯದಲ್ಲೇ ಅದು ವಕ್ಫ್ ಆಸ್ತಿಯೋ ಅಲ್ವೋ ಎಂಬ ವಿಚಾರಣೆ ನಡೆಸಲು ಸೂಚನೆ ನೀಡಲಾಗಿದೆ‌. ಮಳಲಿ ಮಸೀದಿ ವಕ್ಫ್ ಆಸ್ತಿ ಎಂಬ ದಾಖಲೆ‌ ನಮ್ಮ‌ ಬಳಿ ಇರುವುದರಿಂದ ವಕ್ಫ್ ಮಂಡಳಿ ಈ ಪ್ರಕರಣದಲ್ಲಿ ದಾವೆ ಹಾಕಲು ತೀರ್ಮಾನಿಸಿದೆ ಎಂದು ತಿಳಿಸಿದರು.


ಈ ಪ್ರಕರಣ ಟ್ರಿಬ್ಯುನಲ್ ಗೆ ಬರುತ್ತದೆ ಎಂಬ ನಂಬಿಕೆ ವಕ್ಫ್ ಮಂಡಳಿಗೆ ಇತ್ತು. ಆ ಕಾರಣಕ್ಕೆ ವಕ್ಫ್ ಸಮಿತಿ ಮಧ್ಯಪ್ರವೇಶ ಮಾಡಿರಲಿಲ್ಲ. ಸದ್ಯ ಮಳಲಿ‌ಮಸೀದಿ ವಕ್ಫ್ ಆಸ್ತಿ ಹೌದು ಅಲ್ವೋ ಎಂಬ ವಿಷಯಕ್ಕೆ ಬಂದಿರುವುದರಿಂದ ವಕ್ಫ್ ಮಂಡಳಿ ಕಾನೂನು ಹೋರಾಟದಲ್ಲಿ ಪ್ರವೇಶ ಮಾಡಲಿದೆ ಎಂದರು.

ಮಳಲಿ ಮಸೀದಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಸರ್ವೇ ಆಗಿದೆ, ಆರ್ ಟಿಸಿ ಇದೆ, ನಕ್ಷೆ ಇದೆ, ಮಸೀದಿಗೆ ತಸ್ತಿಕ್ ಬರುತ್ತಿದೆ, 2004ರಲ್ಲೇ ಮಸೀದಿ ಜಾಗದ ಸರ್ವೇ ಆಗಿದೆ, ಗೆಜೆಟ್ ನೋಟಿಫಿಕೇಷನ್ ಕೂಡ ಆಗಿದೆ. ಮಳಲಿ ಮಸೀದಿಯು ಮಸೀದಿ ಎಂಬುದಕ್ಕೆ ಅಬ್ಬಕ್ಕ ರಾಣಿ ಕಾಲದ ಇತಿಹಾಸ ಇದೆ. ಹಿರಿಯ ಸಾಹಿತಿ ದಿವಂಗತ ಅಮೃತ ಸೋಮೇಶ್ವರ್ ಅವರ ರಾಣಿ ಅಬ್ಬಕ್ಕ ಸಂಕಥನ ಪುಸ್ತಕದಲ್ಲಿ ಮಳಲಿ ಮಸೀದಿ ಬಗ್ಗೆ ಉಲ್ಲೇಖ ಇದೆ ಎಂದರು. ಮಸೀದಿಗೆ 400 ವರ್ಷಗಳ ಇತಿಹಾಸ ಇದ್ದು ಅರಸರ ಕಾಲದಲ್ಲಿ, ಬ್ರಿಟೀಷರ ಕಾಲದಲ್ಲಿ, ಆರ್ಟಿಸಿ ಬರುವ ಮುಂಚೆ ಇದ್ದಂತಹ ಅಡಂಗಲ್ ನಲ್ಲೂ ಮಳಲಿ ಮಸೀದಿ ಇದ್ದದ್ದಕ್ಕೆ ದಾಖಲೆ ಇದೆ. ನಮ್ಮಲ್ಲಿ ಎಲ್ಲಾ ದಾಖಲೆಗಳು ಇರುವ ಕಾರಣಕ್ಕೆ ವಕ್ಫ್ ಸಮಿತಿ ಈ ಪ್ರಕರಣದಲ್ಲಿ ಪಾರ್ಟಿ ಆಗಲು ಇಚ್ಛಿಸಿದೆ. ನಮ್ಮಲ್ಲಿರುವ ದಾಖಲೆಗಳನ್ನಿಟ್ಟು ನಾವು ವಾದ ಮಂಡಿಸುತ್ತೇವೆ, ನಮಗೆ ಜಯ ಸಿಕ್ಕೇ ಸಿಗುತ್ತೆ ಎಂಬ ವಿಶ್ವಾಸ ಇದೆ ಎಂದರು.

ಮಳಲಿ ಮಸೀದಿಗೆ ಸಂಬಂಧಪಟ್ಟು ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿ ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದೆ. ಮಳಲಿ ಪ್ರದೇಶದ ಜನರಲ್ಲಿ ಯಾವುದೇ ಗೊಂದಲ ಇಲ್ಲ, ಆದರೆ ಹೊರಗಿನ ಶಕ್ತಿಗಳು ಇದರಲ್ಲಿ ತಪ್ಪುಮಾಹಿತಿ ಹರಡುತ್ತಿದ್ದಾರೆ. ಇಲ್ಲಿ ಜಯ, ಅಪಜಯ ಎಂಬುದು ಯಾವುದೂ ಇಲ್ಲ, ಇನ್ನೂ ವಿಚಾರಣೆಯೇ ಶುರುವಾಗಿಲ್ಲ, ಮಂದಿರ ಮಸೀದಿ ಎಂಬ ಬಗ್ಗೆ ಯಾವುದೇ ಆದೇಶಗಳು ಬಂದಿಲ್ಲ. ಮಸೀದಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ಸದ್ಯ ಯಾವುದೇ ತಡೆ ಇಲ್ಲ, ಅಲ್ಲಿ ನಮಾಝ್ ನಡೀತಿದೆ, ಧಾರ್ಮಿಕ ಕಾರ್ಯಕ್ರಮಗಳು ನಡೀತಿವೆ, ದಫನ ಮಾಡಲಾಗುತ್ತಿದೆ. ತಡೆ ಇರುವುದು ಕೇವಲ ಆ ರಚನೆ ಬಗ್ಗೆ, ಅಲ್ಲಿನ ರಚನೆಯನ್ನು ತೆರವು ಮಾಡಬಾರದು ಎಂಬ ತಡೆ ಅಷ್ಟೇ ಇದೆ, ಯಾವುದೇ ಧಾರ್ಮಿಕ ವಿಧಿವಿಧಾನಗಳಿಗೆ ಕೋರ್ಟ್ ತಡೆ ಇಲ್ಲ, ಎಲ್ಲವೂ ಈ ಹಿಂದಿನಂತೆ ಮುಂದುವರಿಯುತ್ತಿದೆ ಎಂದು ನಾಸೀರ್ ಲಕ್ಕಿಸ್ಟಾರ್ ತಿಳಿಸಿದರು.

ಮಳಲಿ‌ ಮಸೀದಿ ವಿಚಾರದಲ್ಲಿ ನಮಗೆ ಜಯ ಸಿಗುತ್ತದೆ, ಅಲ್ಲಿ ಮಸೀದಿ ನಿರ್ಮಾಣವಾಗುವ ಭರವಸೆ ಇದೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.



Join Whatsapp