ಮಂಗಳೂರು: ಗುರುಪುರ ಸಮೀಪದ ಮಳಲಿ ಮಸೀದಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಹೈಕೋರ್ಟ್ನಲ್ಲಿ ಪೂರ್ಣಗೊಂಡಿದೆ. ಶೀಘ್ರ ಆದೇಶದ ನಿರೀಕ್ಷೆಯ ಭರವಸೆ ಮೂಡಿದೆ.
ಮಳಲಿಯ ಅಸಯ್ಯದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ದೇಗುಲವನ್ನು ಹೋಲುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಮಂಗಳೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಈ ಪ್ರಕರಣದ ವಿಚಾರಣೆ ನಡೆಸಲು ಅಧೀನ ನ್ಯಾಯಾಲಯಕ್ಕಿರುವ ಅಧಿಕಾರವನ್ನು ಪ್ರಶ್ನಿಸಿ ಮಸೀದಿ ಪರ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ಪೂರ್ಣಗೊಂಡಿದೆ.
ಮಂಗಳೂರಿನ ಸಿವಿಲ್ ನ್ಯಾಯಾಲಯಕ್ಕೆ ವಿಚಾರಣೆ ನಡೆಸಲು ಅವಕಾಶ ಇದೆ ಎಂದು ತೀರ್ಪು ನೀಡಿದರೆ ವಿಚಾರಣೆ ಮುಂದುವರಿಯಲಿದೆ. ಇಲ್ಲವಾದರೆ ಹೈಕೋರ್ಟ್ ತೀರ್ಪಿನ ವಿರುದ್ಧ ಮೈಸೂರಿನ ಟ್ರಿಬ್ಯುನಲ್ನಲ್ಲಿ ಕೇಸು ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಂಗಳೂರಿನ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಿ ಮಸೀದಿಯ ಕಾಮಗಾರಿ ಮುಂದುವರಿಸಲು ಅವಕಾಶ ನೀಡಬೇಕು. ವಿಶ್ವಹಿಂದೂ ಪರಿಷತ್ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಬೇಕು. ವಕ್ಫ್ ಕಾಯ್ದೆ ಅನ್ವಯ ಈ ದಾವೆಯ ವಿಚಾರಣೆ ನಡೆಸುವ ಅಧಿಕಾರವು ನ್ಯಾಯಾಲಯಕ್ಕೆ ಇಲ್ಲ ಎಂದು ಮಸೀದಿ ಆಡಳಿತ ಮಂಡಳಿ ವಾದಿಸಿತ್ತು. ಇದನ್ನು ತಿರಸ್ಕರಿಸಿ, ವಿಶ್ವಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿತ್ತು.