ಕುಸಿಯುತ್ತಿರುವ ಸಭ್ಯತೆ, ಸಂಸ್ಕೃತಿ

0
543

ಜಗತ್ತು ದಿನದಿಂದ ದಿನಕ್ಕೆ ನಾಗರಿಕತೆಯ ನಿಖರತೆಯತ್ತ ಸಾಗಬೇಕೇ ವಿನಃ ಪತನದತ್ತ ಕುಸಿಯಬಾರದು. ಇಂದಿನ ವೇಗ ಮತ್ತು ಬಣ್ಣದ ಜಗತ್ತು ಸಂಸ್ಕೃತಿಯ ವಿಡಂಬನೆಗೆ ಹೇತುವಾಗುತ್ತಾ ಹೊಸ ತಲೆಮಾರುಗಳನ್ನು ಭ್ರಷ್ಟತೆಯ ಪಥದತ್ತ ಆಕರ್ಷಿತವಾಗುವಂತೆ ಮಾಡುತ್ತಿದೆ. ವ್ಯಭಿಚಾರ ಅಪರಾಧವಲ್ಲ ಎಂದಾದರೆ ಸಮಾಜದಲ್ಲಿ ಸಭ್ಯತೆ, ಸಜ್ಜನಿಕೆ,ಸುಸಂಸ್ಕೃತಿ ಉಳಿಯುವುದೇನು ಬಂತು. ಜೊತೆಗೆ ಎಲ್ಲಾ ತರದ ಲೈಂಗಿಕತೆಯೂ ಅನುವದನೀಯವಾದರೆ ಮಾನವನ ಮಾನ-ಪ್ರಕತಿಯೇ ಇಂದು ಪ್ರಶ್ನಾರ್ಹ ಎಂಬಂತಾಯಿತು. ಸುಪ್ರೀಂ ಕೋರ್ಟ್ ನೀಡಿದ ಇತ್ತೀಚಿನ ತೀರ್ಪುಗಳು ಇಡೀ ಭಾರತೀಯ ಸಮಾಜ ಮತ್ತು ಸಮುದಾಯಗಳಿಗೆ ಮುಜುಗರ ಉಂಟು ಮಾಡಿದೆ ಮಾತ್ರವಲ್ಲದೆ, ಮಾನವಂತರ ಬದುಕು-ಭಾವನೆಗಳಿಗೆ ಕೊಳ್ಳಿ ಇಟ್ಟಂತೆ ಮಾಡಿದೆ. ಯಾವುದೇ ಕುಟುಂಬಗಳು ದೈಹಿಕವಾಗಿಯೂ, ಮಾನಸಿಕವಾಗಿಯೂ ಆರೋಗ್ಯವಂತರಾಗಿರಬೇಕಾದರೆ ಅವುಗಳು ಸಂಸ್ಕೃತಿ ಮತ್ತು ನೈತಿಕತೆಯ ಗಡಿ ದಾಟಬಾರದು. ಸ್ವೇಚ್ಛೆಯ ಲೈಂಗಿಕತೆ, ವ್ಯಭಿಚಾರ ಕುಟುಂಬಗಳನ್ನು ಛಿದ್ರಗೊಳಿಸುತ್ತದೆ ಮತ್ತು ಅಪನಂಬಿ ಹಾಗೂ ಅಶ್ರದ್ಧೆಗಳಿಗೆ ಈಡಾಗಿ ಕಲಹ-ಕಂದರಗಳಿಗೆ ಕಾರಣವಾಗುತ್ತದೆ.

ಇಂದು ಮಾಧ್ಯಮಗಳಲ್ಲಿ ಕೇಳಿ ಬರುತ್ತಿರುವ ‘ಮೀಟೂ’ ಅಭಿಯಾನಗಳು ದೊಡ್ಡದೊಡ್ಡ ಕುಳಗಳ ಒಳಗಿನ ಕೊಳಕು ರಹಸ್ಯಗಳನ್ನು ಬಯಲಿಗೆಳೆಯುತ್ತಿವೆ. ಚಿತ್ರರಂಗದಿಂದ ಹಿಡಿದು, ಮಂತ್ರಿಗಳ ವರೆಗಿನ ‘ಸಭ್ಯ ಹಾಗೂ ಶೋಕಿ’ಯ ಛದ್ಮವೇಷಧಾರಿ ‘ದೊಡ್ಡವರು’ ತಮ್ಮ ತೆವಲಿಗೆ ಯಾವ ಹೆಣ್ಮಕ್ಕಳನ್ನೂ ತಮ್ಮ ಬೋನಿನೊಳಗೆ ಬೀಳಿಸಲು ಹಿಂಜರಿಯಲಾರರು. ಸಿನಿಮಾ, ರಾಜಕೀಯ, ಕಾರ್ಪೊರೇಟ್ ಕಂಪೆನಿಗಳನ್ನೊಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಗಳು ವ್ಯಾಪಕವಾಗಿ ನಡೆಯುತ್ತಿವೆ. ದೇಶದೆಲ್ಲೆಡೆ ಸಾಮೂಹಿಕ ಅತ್ಯಾಚಾರಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಇತ್ಯಾದಿ ಬೆಚ್ಚಿಬೀಳಿಸುವ ಘಟನೆಗಳಿಂದ ನಮ್ಮ ಯುವ ಜನತೆ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನು ದೇಶದ ಜನತೆ ಅರಿತುಕೊಳ್ಳಬೇಕು. ಬಹುಶಃ ಇಂತಹ ಘೋರ ಅಪರಾಧ ಕತ್ಯಗಳಿಗೆ ಕಠಿಣ ಶಿಕ್ಷೆಯ ತೀರ್ಮಾನಗಳು ತ್ವರಿತವಾಗಿ ಬಂದಿದ್ದರೆ ಇಂತಹ ಲೈಂಗಿಕ ಅತ್ಯಾಚಾರ, ದೌರ್ಜನ್ಯಗಳು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಉನ್ನತ ಹುದ್ದೆಗಳಲ್ಲಿ ವ್ಯಕ್ತಿಗಳ ಮೇಲೆ ‘ಮೀಟೂ’ ಆರೋಪಗಳು ಬಂದಿದ್ದಲ್ಲಿ ಅಂಥವರು ಕೂಡಲೇ ತಮ್ಮ ಹುದ್ದೆಗಳಿಂದ ಕೆಳಗಿಳಿಯಬೇಕು.

ಇಂದು, ನಮ್ಮ ದೇಶದಲ್ಲಿ ಇಷ್ಟೊಂದು ದೊಡ್ಡಮಟ್ಟದಲ್ಲಿ ಅತ್ಯಾಚಾರ, ಹತ್ಯೆಗಳು ನಡೆಯುವುದಕ್ಕೆ ಇನ್ನೊಂದು ಕಾರಣ ಸಿನಿಮಾ ಜಗತ್ತು. ಸೆಕ್ಸ್, ಕ್ರೈಂಗಳನ್ನು ವಿಜಂಭಿಸಿ ತೋರಿಸುವ ಘಟನೆಗಳು ಅಪರಾಧ ಕತ್ಯಗಳಿಗೆ ಪ್ರೇರಣೆ ಕೂಡ. ಸಿನಿಮಾ ಪರದೆಯ ಮೇಲೆ ಮೂಡಿಬರುವ ಸ್ವೇಚ್ಛೆಯ ಹಾಡು, ಕುಣಿತ, ಭಂಗಿಗಳು, ಹೊಡೆದಾಟಗಳು, ಹತ್ಯೆಗಳು ಯುವ ಜನತೆಯ ಮನಸ್ಸಿನಲ್ಲಿ ತನ್ನದೇ ಛಾಪು ಮೂಡಿಸುತ್ತಿದೆ.
ಹಿಂದೆ ಅತ್ಯಂತ ಕೆಟ್ಟ ಅಪರಾಧವಾಗಿದ್ದ ವ್ಯಭಿಚಾರ ಇಂದು ಪುರುಷ ಮತ್ತು ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಸ್ವಾತಂತ್ರವೆಂದು ಘೋಷಣೆಯಾಗಿದೆ. ಸಲಿಗಂಕಾಮ ಹಾಗೂ ಲೈಂಗಿಕತೆಯ ಮುಂತಾದ ಅಸಬಂದ್ಧ, ಅಸಹಜತೆಗೆ ಸಿಕ್ಕಿದ ಹಸಿರು ನಿಶಾನೆಗಳು ‘ಮುಂದುವರಿದ ಸಮಾಜದ ಹಕ್ಕುಗಳು’ ಎಂದು ಬಿಂಬಿಸಲ್ಪಡುತ್ತಿವೆ. ಇವೆಲ್ಲವೂ ಕೇವಲ ‘ಸ್ವಾತಂತ್ರ’ ಅಥವಾ ‘ವೈಯಕ್ತಿಕ ಹಕ್ಕುಗಳು’ ಎಂಬ ಲೇಪನದೊಂದಿಗೆ ಬಿಂಬಿಸಲ್ಪಟ್ಟರೂ, ಅವುಗಳೆಲ್ಲವೂ ತಂದೊಡ್ಡುವ ಅಪಾಯಗಳಂತೂ ಅಗಾಧ ಮತ್ತು ಅಸದಶವಾಗಿರುತ್ತವೆ. ನಾಗರಿಕ ಜಗತ್ತಿಗೆ ಬೇಕಾಗಿರುವುದು ಸ್ವೇಚ್ಛೆಯಲ್ಲ, ಸ್ವಾತಂತ್ರ; ಅಸಹಜತೆಯೋ, ಮಗೀಯತೆಯೋ ಅಲ್ಲ. ಬದಲಿಗೆ ಸಹಜತೆ ಮತ್ತು ಮಾನವೀಯತೆ. ತೀರ್ಪುಗಳು ಹೇಗೋ ಬರುತ್ತವೆ, ಹೋಗುತ್ತವೆ. ನಮ್ಮ ಸಮಾಜ ಮಾತ್ರ ಸಂಸ್ಕೃತಿಯ ಉತ್ತುಂಗಕ್ಕೆ ಏರಬೇಕೇ ಹೊರತು, ಅವನತಿಯ ಪಾತಾಳಕ್ಕಲ್ಲ.