ಹುಬ್ಬಳ್ಳಿ: ಇಂಡಿಯಾ ಮೈತ್ರಿಕೂಟ ಅಸ್ತಿತ್ವದಲ್ಲೇ ಇಲ್ಲವಾಗಿದೆ. ಆ ಮೈತ್ರಿಕೂಟ ಒಳಜಗಳಕ್ಕೆ ಸಿಲುಕಿದೆ. ಲೋಕಸಭಾ ಸ್ಪರ್ಧಗೆ ಕೆಲವೊಂದು ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಸ್ಥಾನ ಒಪ್ಪಿಕೊಳ್ಳಲು ಕಾಂಗ್ರೆಸ್ ಸಿದ್ಧವೆನ್ನುವ ಸ್ಥಿತಿಗೆ ತಲುಪಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಸಾಯಿನಗರದಲ್ಲಿ ಸಿದ್ಧಪ್ಪಜ್ಜನ ಮಠ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಡಿಯಾ ಮೈತ್ರಿ ಕೂಟದಲ್ಲಿ ಪಶ್ಚಿಮ ಬಂಗಾಲ, ಮಹಾರಾಷ್ಟ್ರ, ಉತ್ತರ ಪ್ರದೇಶ ಗಳಲ್ಲಿ ಜಗಳ ಹೆಚ್ಚಿದೆ. ಇದೊಂದು ರೀತಿ ಮನೆಮುರುಕ ಘಟಬಂಧನ. ರಾಹುಲ್ ಗಾಂಧಿ ಭಾರತ ಜೋಡೊ ಯಾತ್ರೆ ಮಾಡಿದಷ್ಟು ಒಳ್ಳೆಯದು ಎಂದು ಹೇಳಿದರು.
ಶ್ರೀರಾಮ ಮಂದಿರ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವವರು ಯಾರು ಎಂಬುದು ಜನತೆಗೆ ತಿಳಿದಿದೆ. ಶ್ರೀರಾಮ ಮಂದಿರ ಸಮಾರಂಭಕ್ಕೆ ಎಲ್ಲಿಗೂ ಆಹ್ವಾನ ನೀಡಲಾಗಿದೆ. ಸಹಜವಾಗಿ ಬಂದಿದ್ದರೆ ಇಷ್ಟು ಚರ್ಚೆ ಆಗುತ್ತಿರಲಿಲ್ಲ. ಸಂಸದ ಅನಂತಕುಮಾರ ಹೆಗ್ಡೆ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಸಲಾರೆ. ಒಳ್ಳೆ ವಾತಾವರಣದಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಆಗಬೇಕೆಂಬುದಷ್ಟೆ ನಮ್ಮ ಉದ್ದೇಶವಾಗಿದೆ ಎಂದರು.
ನೈತಿಕ ಪೊಲೀಸ್ ಗಿರಿ ಬಗ್ಗೆ ಈ ಹಿಂದೆ ದೊಡ್ಡದಾಗಿ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಹಾನಗಲ್ಲ ಘಟನೆಯಲ್ಲಿ ಮೌನಕ್ಕೆ ಜಾರಿದ್ದಾರೆ. ಹಾನಗಲ್ಲ ಘಟನೆಯಲ್ಲಿ ರಾಜ್ಯ ಸರ್ಕಾರದ ನಡೆ ನೋಡಿದರೆ ಯಾರನ್ನೋ ರಕ್ಷಿಸಲು ಮುಂದಾದಂತಿದೆ ಪ್ರಹ್ಲಾದ್ ಜೋಷಿ ಹೇಳಿದರು.