ಕೋಝಿಕ್ಕೋಡ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುವಂತೆ ಮೂರು ಪಕ್ಷಗಳ ನಾಯಕರು ಒತ್ತಾಯ ಮಾಡಿವೆ ಎಂದು ನಟ ಪ್ರಕಾಶ್ ರೈ ತಿಳಿಸಿದ್ದಾರೆ.
ಇಲ್ಲಿ ನಯುತ್ತಿರುವ ಕೇರಳ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು,ನಾನು ನರೇಂದ್ರ ಮೋದಿಯ ಟೀಕಾಕಾರ ಎಂಬ ಕಾರಣಕ್ಕೆ ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ ಹೊರತು, ನನ್ನ ಸಿದ್ದಾಂತಕ್ಕೆ ಬೆಂಬಲ ನೀಡಲು ಅಲ್ಲ ಎಂದು ಅವರು ಇದೇ ಸಮಯದಲ್ಲಿ ವಿಶ್ಲೇಷಿಸಿದ್ದಾರೆ.
ನಾನು ಮೋದಿಯವರನ್ನು ದ್ವೇಷಿಸುವುದಿಲ್ಲ, ನಾನೇನು ಅವರ ಸಂಬಂಧಿಯಲ್ಲ, ನಮ್ಮ ನಡುವೆ ಆಸ್ತಿ ವಿವಾದವೂ ಇಲ್ಲ, ನಾನೊಬ್ಬ ತೆರಿಗೆದಾರನಾಗಿದ್ದು, ಆಡಳಿತದಲ್ಲಿರುವವರು ಸರಿಯಾದ ರೀತಿಯಲ್ಲಿ ತಮ್ಮ ಕರ್ತವ್ಯ ನಿರ್ವಹಣೆ ಮಾಡಬೇಕೆಂದು ಪ್ರಶ್ನಿಸುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಅವರನ್ನು ದ್ವೇಷಿಸುತ್ತೀರಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.
ಪ್ರಸ್ತುತ ರಾಜಕೀಯ ಪಕ್ಷಗಳು ಜನರ ಮೇಲಿನ ತಮ್ಮ ಕಾಳಜಿ ಕಳೆದುಕೊಂಡಿವೆ ಮತ್ತು ಅವುಗಳಲ್ಲಿ ಯಾವುದೇ ಸತ್ಯ ಉಳಿದಿಲ್ಲ. ಒಂದು ಕ್ಷೇತ್ರದ ಅಭ್ಯರ್ಥಿಯನ್ನು ಹುಡುಕಲು ಪಕ್ಷಗಳು ಹೆಣಗಾಡುತ್ತಿವೆ ಎಂದು ರಾಜಕೀಯ ಪಕ್ಷಗಳನ್ನು ಅವರು ದೂರಿದರು.
ಭಾನುವಾರ ಮುಕ್ತಾಯಗೊಂಡ ಸಾಹಿತ್ಯ ಉತ್ಸವದಲ್ಲಿ ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್, ನೊಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ, ಅಮೆರಿಕದ ವೈದ್ಯ-ಲೇಖಕ ಅಬ್ರಹಾಂ ವರ್ಗೀಸ್, ಲೇಖಕ ಪೆರುಮಾಳ್ ಮುರುಗನ್ ಸೇರಿದಂತೆ ಹಲವರು ಭಾಗವಹಿಸಿದ್ದರು.