ಪಣಜಿ: ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಂದು ಶವವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಕರ್ನಾಟಕಕ್ಕೆ ಪ್ರಯಾಣ ಬೆಳೆಸಿದ್ದ ಸ್ಟಾರ್ಟ್ಅಪ್ ಕಂಪನಿಯ ಮುಖ್ಯ ಸಿಇಒಯನ್ನು ಗೋವಾದ ನ್ಯಾಯಾಲಯ ಮಂಗಳವಾರ ಆರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಚಿತ್ರದುರ್ಗ ಮೂಲದ ಸುಚನಾ ಸೇಠ್ (39) ತನ್ನ ನಾಲ್ಕು ವರ್ಷದ ಮಗನನ್ನು ಕೊಂದು ಶವವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಪ್ರಯಾಣಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದರು.
ಸುಚನಾ ಸೇಠ್ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 201 (ಸಾಕ್ಷ್ಯ ನಾಶ) ಮತ್ತು ಮಕ್ಕಳ ಕಾಯ್ದೆಯಡಿಯಲ್ಲಿ ಗೋವಾದ ಕ್ಯಾಲಂಗುಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುಚನಾ ನಾಲ್ಕು ವರ್ಷದ ಅಮಾಯಕ ಮಗನನ್ನು ಕೊಂದ ಹಿಂದಿನ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ ತಾನು ಪತಿಯಿಂದ ಬೇರ್ಪಟ್ಟಿದ್ದೇನೆ ಮತ್ತು ಪ್ರಸ್ತುತ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಸುಚನಾ ಸೇಠ್ ಪೊಲೀಸರಿಗೆ ತಿಳಿಸಿದ್ದಾರೆ. ಗಂಡನ ಮೇಲಿನ ಸೇಡಿಗೆ ತನ್ನ ಕರುಳಕುಡಿಯನ್ನು ಕೊಂದಿದ್ದಾಳೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಆನ್‌ಲೈನ್ ಪ್ಲಾಟ್‌ಫಾರ್ಮ್ ‘ಲಿಂಕ್ಡ್‌ಇನ್’ ನಲ್ಲಿ ಸೇಥ್ ಅವರ ಪೇಜ್ ಪ್ರಕಾರ, ಸುಚನಾ ಸ್ಟಾರ್ಟ್-ಅಪ್ ಕಂಪನಿ ‘ಮೈಂಡ್‌ಫುಲ್ ಎಐ ಲ್ಯಾಬ್’ ನ ಸಿಇಒ ಆಗಿದ್ದಾರೆ ಮತ್ತು 2021 ರ ‘ಎಐ ಎಥಿಕ್ಸ್’ ನಲ್ಲಿನ ಟಾಪ್ 100 ಪ್ರತಿಭಾವಂತ ಮಹಿಳೆಯರಲ್ಲಿ ಒಬ್ಬಳು.