ಎಫ್. ನುಸೈಬಾ ಕಲ್ಲಡ್ಕ
ಆಚಾರವಿಲ್ಲದ ನಾಲಿಗೆಯು ಯಾವ ಮಟ್ಟಕ್ಕೆ ಹೊರಳಾಡುತ್ತದೆ ಎಂಬುದನ್ನು ಕಲ್ಲಡ್ಕ ಪ್ರಭಾಕರ ಭಟ್ಟರ ನಾಲಗೆ ಉದಾಹರಣೆ. ತನ್ನ ವಯಸ್ಸಿನ ಪರಿಗಣನೆಯೂ ಇಲ್ಲದೆ, ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಮಹಿಳೆಯರ ಬಗ್ಗೆ ಅವಾಚ್ಯವಾಗಿ ಹೇಳಿಕೆ ನೀಡಿ ಮಹಿಳೆಯರ ಘನತೆ, ಗೌರವಕ್ಕೆ ಸವಾಲೊಡ್ಡುತ್ತಿರುವ ಭಟ್ಟರ ನಡೆ ನಿಜಕ್ಕೂ ನಿರ್ಲಜ್ಜತನದ್ದು. ಮುಸ್ಲಿಂ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಭಟ್ಟರು ವಾಸ್ತವದಲ್ಲಿ ತನ್ನನ್ನು ತಾನೇ ಜಗತ್ತಿನ ಮುಂದೆ ಬೆತ್ತಲಾಗಿಸಿದ್ದಾರೆ.
ಪ್ರಭಾಕರ ಭಟ್ಟರು ಅತ್ಯಂತ ಕೀಳು ಮಟ್ಟದಲ್ಲಿ ನಾಲಗೆ ಹರಿಯಬಿಡುವುದಕ್ಕೆ ಸ್ಫೂರ್ತಿಯಾದರೂ ಏನು ಎಂದು ಅವಲೋಕಿಸಿದರೆ ಕಂಡು ಬರುವ ಉತ್ತರ, ಅವರು ಆರ್.ಎಸ್.ಎಸ್ ಪಾಠ ಶಾಲೆಯಲ್ಲಿ ದೊರೆತ ಅಪ್ರಬುದ್ಧ ಶಿಕ್ಷಣ ಎಂಬುವುದು. ರಾಜಕೀಯ ತೆವಲು ಮತ್ತು ಧರ್ಮ ದ್ವೇಷದ ಅಮಲಿನಲ್ಲಿ ಮೀಯುತ್ತಿರುವ ಆರ್.ಎಸ್.ಎಸ್ ಹಿಂಬಾಲಕರು ವಿವೇಚನಾ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ದ್ವೇಷ, ಅಸಹನೆ, ಮೌಢ್ಯತೆಯನ್ನೇ ಇವರಲ್ಲಿ ಬಿತ್ತಲಾಗುತ್ತಿದೆ. ಆರ್.ಎಸ್.ಎಸ್ ತನ್ನ ತೆಕ್ಕೆಗೆ ಬರುವ ನವ ತಲೆಮಾರುಗಳನ್ನು ಪಳಗಿಸುವ ಪರಿ ಅತ್ಯಂತ ದಾರುಣವಾಗಿದೆ.
ಸ್ವತಃ ಆರ್.ಎಸ್.ಎಸ್ ಸರಸಂಚಾಲಕರಾಗಿದ್ದ ಗೋಳ್ವಲ್ಕರ್ ಮಾತುಗಳನ್ನೆ ಕೇಳಿ: “ನಾವು ಸಂಘಟನೆಯೊಂದರ ಭಾಗವೆಂದು ಹೇಳಿ ಅದರ ಶಿಸ್ತನ್ನು ಒಪ್ಪಿದಾಗ ಜೀವನದಲ್ಲಿ ಆಯ್ಕೆಗಳ ಪ್ರಶ್ನೆಯೇ ಬರುವುದಿಲ್ಲ. ಆಡಿ ಎಂದರೆ ಆಡಬೇಕು. ಸಭೆ ನಡೆಸಿ ಎಂದರೆ ನಡೆಸಬೇಕು. ಓರ್ವ ರಾಜಕೀಯದಲ್ಲಿ ಕೆಲಸ ಮಾಡಿದರೂ ಅದರ ಅರ್ಥ ಆತನಿಗೆ ರಾಜಕೀಯದಲ್ಲಿ ಭಾರಿ ಆಸಕ್ತಿ ಇದೆ ಎಂದಲ್ಲ.ಅವರು ರಾಜಕೀಯಕ್ಕಾಗಿ ನೀರಿಲ್ಲದ ಮೀನಿನಂತೆ ಪ್ರಾಣ ತ್ಯಾಗ ಮಾಡುವುದಿಲ್ಲ. ಅವರಿಗೆ ವಿವೇಚನಾ ಶಕ್ತಿಯೇ ಬೇಕಾಗಿಲ್ಲ”
ಅಂದರೆ, ಇವರ ಶಾಖೆಗಳಲ್ಲಿ ಸ್ವಯಂ ಸೇವಕರ ಹೆಸರಿನಲ್ಲಿ ಬೆಳೆದು ಬರುತ್ತಿರುವ ತಲೆಮಾರುಗಳು ಆತ್ಮ ಸಾಕ್ಷಿ ಇಲ್ಲದ , ಅಂತಃಕರಣವಿಲ್ಲದ ಕೃತಕ ಮಾನವರಾಗಿ ಈ ಸಮಾಜಕ್ಕೆ ಅರ್ಪಣೆಯಾಗುತ್ತಿದ್ದಾರೆ. ಸಾಮಾಜಿಕ ಬದ್ಧತೆ , ಸೈದ್ಧಾಂತಿಕತೆ, ವೈಚಾರಿಕತೆಯನ್ನು ಅಡವಿಟ್ಟು ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿಸಿದ ಮನುಸ್ಮೃತಿಯನ್ನು ಆರಾಧಿಸುವ ನಾಗ್ಪುರದ ಕಾಲಾಳುಗಳಿಂದ ಅಸಭ್ಯವಲ್ಲದೆ ಸಭ್ಯತೆಯನ್ನು ನಿರೀಕ್ಷಿಸಲು ಹೇಗೆ ಸಾಧ್ಯ?
ಈ ಸಮಾಜಕ್ಕೆ ಕಂಟಕವಾಗುತ್ತಿರುವ ಈ ವಿಷ ಜಂತುಗಳ ಹೆಡೆಮುರಿ ಕಟ್ಟಿ ದಮನಿಸಬೇಕಾದ ನಮ್ಮ ಆಡಳಿತ ವ್ಯವಸ್ಥೆಯ ಸ್ಥಿತಿ ಇದಕ್ಕಿಂತಲೂ ಶೋಚನೀಯವಾಗಿದೆ. ಗತಿಕೆಟ್ಟ ಪ್ರಭುತ್ವವೊಂದು ನಮ್ಮನ್ನಾಳುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಜಾತ್ಯತೀತತೆಯ ಮುಖವಾಡ ಹೊತ್ತು ಮುಸ್ಲಿಂ ಸಮುದಾಯದ ಮತಗಳಿಂದಲೇ ಅಧಿಕಾರ ಗಿಟ್ಟಿಸಿಕೊಂಡರೂ ಪ್ರಸ್ತುತ ರಾಜ್ಯ ಸರ್ಕಾರ , ತನ್ನನ್ನು ಆಯ್ಕೆ ಮಾಡಿದ ಪ್ರಜೆಗಳ ಹಿತರಕ್ಷಣೆಗೆ ನಿಷ್ಠೆನಾಗಿರದೆ ಕೇವಲ ಸಂಘಪರಿವಾರದ ಓಲೈಕೆಯಲ್ಲಿ ನಿರತವಾಗಿದೆ. ಮುಸ್ಲಿಂ ಮಹಿಳಾನಿಂದಕ ಪ್ರಭಾಕರ ಭಟ್ಟರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ , ಬಂಧಿಸುವ ಮೂಲಕ ಜಾತ್ಯತೀತ ಸಿದ್ಧಾಂತವನ್ನು ಎತ್ತಿ ಹಿಡಿಯುವಲ್ಲಿ ವಿಫಲವಾಗಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳ ಪ್ರಭಾಕರ ಭಟ್ಟರ ವಿರುದ್ಧ FIR ದಾಖಲಾಗಿ ಬಂಧನಕ್ಕೆ ಎಲ್ಲಾ ಅವಕಾಶ ಇದ್ದರೂ, ಕಾಂಗ್ರೆಸ್ ಸರ್ಕಾರ ಕಲ್ಲಡ್ಕ ಭಟ್ಟರಿಗೆ ಜೈಲು ವಾಸದಿಂದ ಮುಕ್ತಿ ಕೊಡುವ ಗ್ಯಾರಂಟಿಯನ್ನು ಘೋಷಿಸಿದೆ.
ಅಶಾಂತಿಯ ನೆಪವೊಡ್ಡಿ ಆಕ್ರಮಿತ ಪ್ಯಾಲೆಸ್ತೀನ್ ಪರ ಶಾಂತಿ ಮಂತ್ರ ಮೊಳಗಿಸಲು ಸಾಹಿತಿಗಳು, ಕವಿಗಳು ಸೇರಿ ನಡೆಸಲು ಉದ್ದೇಶಿಸಿದ ಕವಿಗೋಷ್ಠಿಗೆ ನಿರ್ಬಂಧ ವಿಧಿಸಿದ, ಪ್ಯಾಲೆಸ್ತೀನ್ ಪರವಾದ ಸ್ಟೇಟಸ್ ಹಾಕಿದ ಯುವಕನನ್ನು ಬಂಧಿಸಿದ ಸರ್ಕಾರ ಹಾಗೂ ಪೋಲೀಸ್ ವ್ಯವಸ್ಥೆಗೆ ಭಟ್ಟರ ಅಸಭ್ಯ ಮಾತುಗಳು, ವಿಧ್ಯಾರ್ಥಿನಿ ಮುಸ್ಕಾನ್ಗೆ ಒಡ್ಡಿದ ಬೆದರಿಕೆಯ ಹೇಳಿಕೆಗಳು ಶಾಂತಿಯ ಪ್ರತೀಕವಾಗಿ ಕಂಡಿತೇ?
ವಿಷಾದವಿದೆ, ಪ್ರತಿ ಬಾರಿಯೂ ಎಂಜಲೆಲೆಯಂತೆ ಬಳಸಿ ಬಿಸಾಡಲ್ಪಡುತ್ತಿರುವ ಮುಸ್ಲಿಂ ಸಮುದಾಯದ ಅಸಹಾಯಕತೆಯ ನೆನೆದು ವಿಷಾದವಿದೆ. ಓರ್ವ ಕೋಮುವಾದಿಯು ಮುಸ್ಲಿಂ ಮಹಿಳೆಯರ ಘನತೆಗೆ ಸವಾಲೊಡ್ಡಲು ಅವಕಾಶ ನೀಡಿದ ವ್ಯವಸ್ಥೆಯ ಕೈಗೆ ಅಧಿಕಾರದ ಗದ್ದುಗೆ ನೀಡಿದ ಮುಸ್ಲಿಂ ಸಮುದಾಯದ ಬಗ್ಗೆ ವಿಷಾದವಿದೆ.
ಸಮುದಾಯದ ಮಹಿಳೆಯರ ಕುರಿತಾಗಿ ಬಹಿರಂಗ ಸಭೆಯಲ್ಲಿ ಇಷ್ಟೊಂದು ಅವಾಚ್ಯವಾಗಿ ಹೇಳಿಕೆ ನೀಡಿದ ಕೋಮುವಾದಿಯ ವಿರುದ್ಧ ಒಂದಕ್ಷರ ಮಾತಾಡಲೂ ಓರ್ವ ಅಧಿಕಾರಸ್ಥ ಮುಸ್ಲಿಂ ಜನಪ್ರತಿನಿಧಿ ಇಲ್ಲದಿರುವುದು ಈ ಸಮುದಾಯದ ದುರಂತವಲ್ಲದೆ ಇನ್ನೇನು? ಇವರುಗಳು ತುಟಿ ಬಿಚ್ಚಲು ಇನ್ನೆಷ್ಟು ಅವಮಾನಗಳನ್ನು ಈ ಸಮುದಾಯ ಸಹಿಸಬೇಕು?
ಪ್ರತಿ ಚುನಾವಣೆಯಲ್ಲೂ ಬಿಜೆಪಿ ಎಂಬ ಗುಮ್ಮನನ್ನು ತೋರಿಸಿ ಮುಸ್ಲಿಮರ ಮತ ಕೀಳುವ ಅನಿವಾರ್ಯತೆ ಕಾಂಗ್ರೆಸ್ ಗೆ ಏಕಿದೆ? ಏಕೆಂದರೆ, ಮುಸ್ಲಿಮರ ಪರವಾದ ಅಭಿವೃದ್ಧಿ ಕಾರ್ಯಗಳನ್ನು ತೋರಿಸಿ, ಈ ಸಮುದಾಯಕ್ಕೆ ಅಗತ್ಯವಾದ ರಕ್ಷಣೆ ಭದ್ರತೆಯನ್ನು ಒದಗಿಸಿ, ಅವರ ನ್ಯಾಯಪರ ಬೇಡಿಕೆಗಳನ್ನು ಈಡೇರಿಸಿ ಮತ ಯಾಚಿಸುವ ನೈತಿಕತೆಯನ್ನು ಕಾಂಗ್ರೆಸ್ ಉಳಿಸಿಕೊಂಡಿಲ್ಲ. ಇದನ್ನು ಮುಸ್ಲಿಂ ಸಮುದಾಯ ಅರ್ಥೈಸಬೇಕಿದೆ. ಕನಿಷ್ಠ ಪಕ್ಷ ತಾವೇ ಆರಿಸಿ ಕಳಿಸಿದ ನಾಯಕರನ್ನು ಪ್ರಶ್ನಿಸುವ ದಿಟ್ಟತನವನ್ನು ಪ್ರದರ್ಶಿಸಿ ‘ನಾವು ಯಾವುದೇ ಪಕ್ಷದ ಅಡಿಯಾಳುಗಳಲ್ಲ’ ಎಂಬುದನ್ನು ನಿರೂಪಿಸಬೇಕಿದೆ.