ಸಾಂದರ್ಭಿಕ ಚಿತ್ರ
ಗಾಝಾ: ಕೇಂದ್ರ ಮತ್ತು ದಕ್ಷಿಣ ಗಾಝಾ ಮೇಲೆ ಇಸ್ರೇಲ್ ಮತ್ತೆ ತೀವ್ರ ದಾಳಿ ಆರಂಭಿಸಿದ್ದು, ಬುರೇಜಿ ನಿರಾಶ್ರಿತರ ಶಿಬಿರ, ಖಾನ್ ಯೂನಿಸ್ ಮತ್ತು ರಫಾ ನಗರಗಳ ಮೇಲೆ ಬಾಂಬ್ಗಳ ಸುರಿಮಳೆಗರೆದಿವೆ ಎಂದು ವರದಿಯಾಗಿದೆ. ಬುಧವಾರ ಬೆಳಗಿನ ಜಾವ ದಾಳಿ ನಡೆದಿದೆ.
ಉತ್ತರ ಗಾಜಾ ಮೇಲೆ ದಾಳಿ ತೀವ್ರಗೊಳ್ಳುತ್ತಿದ್ದಂತೆಯೇ ಸುಮಾರು 10,000 ಜನರು ಇಲ್ಲಿ ಬಂದು ಆಶ್ರಯ ಪಡೆದಿದ್ದ ಶಿಬಿರದ ಮೇಲೆ ದಾಳಿ ನಡೆದಿದೆ.
ಕದನ ವಿರಾಮ ಘೋಷಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿದ್ದರೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಪಟ್ಟು ಸಡಿಲಿಸದೆ, ಯುದ್ಧ ತೀವ್ರಗೊಳಿಸುವುದಾಗಿ ಪುನರುಚ್ಚರಿಸಿದ ಬಳಿಕ ದಾಳಿ ತೀವ್ರವಾದಂತಿದೆ ಎಂದು ಹೇಳಲಾಗುತ್ತಿದೆ. ಕ್ರಿಸ್ಮಸ್ ಮುನ್ನಾದಿನದಿಂದ ಈವರೆಗೆ ಕೇಂದ್ರ ಗಾಜಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ.
ಯುದ್ಧದಲ್ಲಿ ಈವರೆಗೆ 20,900 ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.