ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸತ್ತವರನ್ನು ಮರಳಿ ತರುತ್ತಾರಾ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
ಶ್ರೀನಗರದಿಂದ 80 ಕಿಲೋಮೀಟರ್ ದೂರದಲ್ಲಿರುವ ಕುಲ್ಗಾಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ, ಅವರ ಭೇಟಿಯ ಬಗ್ಗೆ ನನಗೆ ಯಾವುದೇ ನಿರೀಕ್ಷೆಗಳಿಲ್ಲ. ಅವರು ಸತ್ತವರನ್ನು ಮರಳಿ ತರಬಹುದೇ? ಅವರಿಗೆ ಆ ಶಕ್ತಿ ಇದೆಯೇ? ಅಂತಹ ಅನ್ಯಾಯ ಮರುಕಳಿಸದಂತೆ ಅವರು ನೋಡಿಕೊಳ್ಳಬೇಕು ಎಂದಿದ್ದಾರೆ.
ಕಳೆದ ಗುರುವಾರ ಪೂಂಚ್‌ನಲ್ಲಿ ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ನಾಲ್ವರು ಸೈನಿಕರು ಹುತಾತ್ಮರಾಗಿದ್ದರು. ಮೂವರು ನಾಗರಿಕರು ಸಹ ಮೃತಪಟ್ಟಿದ್ದರು. ಸೇನಾ ವಾಹನಗಳ ಮೇಲಿನ ಭಯೋತ್ಪಾದಕ ದಾಳಿಯ ನಂತರ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ರಕ್ಷಣಾ ಸಚಿವರು ಇಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.