ಚಿತ್ರದುರ್ಗ: ಪೋಕ್ಸೊ ಕೇಸಲ್ಲಿ ಜೈಲುಪಾಲಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿನ ದೌರ್ಜನ್ಯ ಎಸಗಿದ ಆರೋಪಿ ಮುರುಘಾ ಶ್ರೀಗೆ ಮಠದ ಅಧಿಕಾರವನ್ನು ಮರಳಿ ವಹಿಸಲಾಗಿದೆ.
ಎಸ್ ಜೆ ಎಂ ವಿದ್ಯಾಪೀಠ ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಚಿತ್ರದುರ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮುರುಘಾ ಮಠ ಮತ್ತು ಎಸ್ ಜೆ ಎಂ ವಿದ್ಯಾಪೀಠಗಳ ಆಡಳಿತವನ್ನು ದಿನಾಂಕ 05-12-2023ರಂದು ಮುರುಘಾಮಠದ ಪೀಠಾಧಿಪತಿಗಳು ಮತ್ತು ಎಸ್ ಜೆ ಎಂ ವಿದ್ಯಾಪೀಠದ ಅಧ್ಯಕ್ಷರಿಗೆ ಹಸ್ತಾಂತರಿಸಿರುತ್ತಾರೆ ಎಂದು ಹೇಳಿದೆ. ಎಂದಿನಂತೆ ಶ್ರೀಮಠದ ಸದ್ಭಕ್ತರು, ನೌಕರರುಗಳು ಮಾಧ್ಯಮ ಪ್ರತಿನಿಧಿಗಳು ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.
ಮುರುಘಾ ಶ್ರೀ ನವೆಂಬರ್ 16ರಂದು ಪೋಕ್ಸೊ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಚಿತ್ರದುರ್ಗಕ್ಕೆ ಪ್ರವೇಶಿಸದಂತೆ ಹಾಗೂ ವಿವಿಧ ಷರತ್ತುಗಳೊಂದಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಹೀಗಾಗಿ ಮಠದ ಅಧಿಕಾರವನ್ನು ಹಸ್ತಾಂತರಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಚಿತ್ರದುರ್ಗಕ್ಕೆ ಪ್ರವೇಶಿಸದಂತೆ ಷರತ್ತು ಮುಂದುವರೆಸಿ, ಅಧಿಕಾರ ನ್ಯಾಯಾಲಯ ಹಸ್ತಾಂತರಿಸುವಂತೆ ಆದೇಶಿಸಿದೆ.