ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ 115 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರದಲ್ಲಿದ್ದ ಕಾಂಗ್ರೆಸನ್ನು ಸೋಲಿಸಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ. ಆದರೆ ಸರ್ಕಾರ ರಚನೆಗೂ ಮುನ್ನವೇ ಜೈಪುರದ ಹವಾ ಮಹಾಲ್ ಕ್ಷೇತ್ರದ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ಎಂಬಾತ ತಮ್ಮ ಕ್ಷೇತ್ರದ ರಸ್ತೆಯ ಬದಿಗಳಲ್ಲಿರುವ ಮಾಂಸಾಹಾರ ಹೋಟೆಲ್ಗಳನ್ನು ಮುಚ್ಚುವಂತೆ ಖಡಕ್ ಆದೇಶ ಮಾಡಿದ್ದಾರೆ.
ಖಡಕ್ ಆದೇಶ ಮಾಡುವ ವೀಡಿಯೋ ವೈರಲ್ ಆಗಿದ್ದು, ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ. ಅಧಿಕಾರಿಯೊಬ್ಬರಿಗೆ ಕರೆ ಮಾಡಿದ ಅವರು, ರಸ್ತೆ ಬದಿಯಲ್ಲಿರುವ ನಾನ್ ವೆಜ್ ಹೋಟೆಲ್ಗಳನ್ನು ಸಂಜೆ ಒಳಗೆ ಮುಚ್ಚಿಸಬೇಕು. ನಾನ್ವೆಜ್ ಅನ್ನು ರಸ್ತೆಯಲ್ಲಿ ಬಹಿರಂಗವಾಗಿ ಮಾರಾಟ ಮಾಡಬಹುದೇ? ಹೌದೋ ಅಥವಾ ಇಲ್ಲವೋ ಉತ್ತರಿಸಿ. ಹಾಗಾದ್ರೆ ನೀವು ಇದನ್ನು ಬೆಂಬಲಿಸುತ್ತೀರಿ. ಕೂಡಲೇ ರಸ್ತೆ ಬದಿಯ ಎಲ್ಲ ಮಾಂಸಾಹಾರಿ ಅಂಗಡಿಗಳನ್ನು ಮುಚ್ಚಬೇಕು. ಸಂಜೆ ನಿಮ್ಮಿಂದ ವರದಿ ತರಿಸಿಕೊಳ್ಳುತ್ತೇನೆ. ಅಧಿಕಾರಿ ಯಾರೆಂಬುದನ್ನು ಸಹ ನಾನು ನೋಡುವುದಿಲ್ಲ ಎಂದು ಬಾಲಮುಕುಂದ್ ಆಚಾರ್ಯ ಎಚ್ಚರಿಕೆ ನೀಡುವುದನ್ನು ವೀಡಿಯೋ ತೋರಿಸುತ್ತದೆ.
ಈ ಸಂಬಂಧವಾಗಿ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ, ಯಾರಾದರೂ ಇಂತಹದನ್ನು ಅದು ಹೇಗೆ ಮಾಡುತ್ತಾರೆ ಎಂದು ಆಶ್ಚರ್ಯದಿಂದ ಕೇಳಿದ್ದಾರೆ. ಈ ಆದೇಶ ಸರಿಯಲ್ಲ. ನಾನ್ವೆಜ್ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಯಾರಾದರೂ ಮಾಂಸಾಹಾರಿ ಆಹಾರದ ಮಳಿಗೆ ಸ್ಥಾಪಿಸಲು ಬಯಸಿದರೆ ಅದನ್ನು ತಡೆಯುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ರಾಜಸ್ಥಾನದ ಹವಾ ಮಹಲ್ ವಿಧಾನಸಭಾ ಕ್ಷೇತ್ರದಿಂದ 600 ಮತಗಳ ಅಲ್ಪ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆರ್ಆರ್ ತಿವಾರಿ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.