ಹೈದರಾಬಾದ್: ನಾಲ್ಕು ವರ್ಷದ ಎಳೆ ಮಗುವನ್ನು ನೇಣು ಬಿಗಿದು ಕೊಂದ ದಂಪತಿ, ಬಳಿಕ ತಾವೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಹೈದರಾಬಾದ್ನ ಮುಶೀರಾಬಾದ್ನಲ್ಲಿ ನಡೆದಿದೆ.
ಗಂಗಾಪುತ್ರ ಕಾಲೋನಿಯಲ್ಲಿರುವ ಬಾಡಿಗೆ ಮನೆಯಲ್ಲಿರುವ ಸಾಯಿಕೃಷ್ಣ ಮತ್ತು ಅವರ ಮಡದಿ ಚಿತ್ರಕಲಾ ತಮ್ಮ ಎಳೆ ಮಗಳು ತೇಜಸ್ವಿಯನ್ನು ನೇಣು ಬಿಗಿದು ನಂತರ ಆತ್ಮಹತ್ಯೆಯ ಕಾರಣವನ್ನು ಗೋಡೆಯ ಮೇಲೆ ಬರೆದು ಸಾವಿಗೀಡಾಗಿದ್ದಾರೆ.
ದಾರುಣ ಘಟನೆಯ ಒಂದು ದಿನದ ಬಳಿಕ ಅನುಮಾನಗೊಂಡ ನೆರೆಹೊರೆಯವರು ಮನೆಯ ಬಾಗಿಲನ್ನು ಬಡಿದಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ಮೂವರೂ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ದಂಪತಿ ಮಗಳನ್ನು ಕೊಂದು ಸಾವೀಗೀಡಾದ ಕಠಿಣ ನಿರ್ಧಾರಕ್ಕೆ ಕಾರಣವನ್ನು ಗೋಡೆಯ ಮೇಲೆ ಬರೆದಿದ್ದಾರೆ. ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಚಿತ್ರಕಲಾ ಅವರನ್ನು ಖಾಸಗಿ ಸಂಸ್ಥೆಯಲ್ಲಿ ಕೆಲಸದಿಂದ ವಜಾಗೊಳಿಸಿದ್ದಕ್ಕೆ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ತನಗೆ ಅನ್ಯಾಯವಾಗಿದೆ ಮತ್ತು ಉನ್ನತ ಮಟ್ಟದಲ್ಲಿ ಮನವಿ ಮಾಡಿದರೂ ನ್ಯಾಯ ಸಿಕ್ಕಿಲ್ಲ ಎಂದು ದಂಪತಿ ಬರೆದಿದ್ದಾರೆ. ಸಾಯಿಕೃಷ್ಣ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.