ಸೂರತ್ : ಚುನಾವಣೆಗೆ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ ಬಿಜೆಪಿ ಗೆಲುವಿಗೆ ಸಹಾಯ ಮಾಡುತ್ತಿದೆ ಎಂದು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಅಲ್ಲದೆ, ಮುಂಬರುವ ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿಯ ನಡುವೆ ನೇರ ಸ್ಪರ್ಧೆ ನಡೆಯಲಿದೆ ಎಂದು ಅವರು ತಿಳಿಸಿದರು. ಸೂರತ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.
ಗುಜರಾತ್ ಜನರು ಬಿಜೆಪಿಗೆ ಪರ್ಯಾಯವಾಗಿ ಆಮ್ ಆದ್ಮಿ ಪಕ್ಷವನ್ನು ನೋಡುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿಯ ನಡುವೆ ಪೈಪೋಟಿ ನಡೆಯುತ್ತಿರುವುದು ಖುಷಿಯ ವಿಚಾರ. ಗುಜರಾತ್ ಜನರು ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಕೆಲಸಗಳನ್ನು ನೋಡಿ, ಅವರಿಗೊಂದು ಅವಕಾಶ ಮಾಡಿಕೊಡಲು ಮುಂದಾಗಿದ್ದಾರೆ. ಆಮ್ ಆದ್ಮಿ ಪಾರ್ಟಿ ಈಗಾಗಲೇ ಅಹಮದಾಬಾದ್ ಮತ್ತು ರಾಜ್ ಕೋಟ್ ಗೆ ಭೇಟಿ ನೀಡಿದೆ, ಈಗ ಸೂರತ್ ನಲ್ಲಿದೆ ಎಂದು ಅವರು ತಿಳಿಸಿದರು.
ತಾವು ಬಿಜೆಪಿಯಿಂದ ಬೇಸತ್ತಿದ್ದೇವೆ ಮತ್ತು ಅದನ್ನು ಸೋಲಿಸಲು ಬಯಸಿದ್ದೇವೆ ಎಂದು ಜನರು ಹೇಳುತ್ತಿದ್ದಾರೆ. ಆದರೆ, ತಮಗೆ ಈ ಮೊದಲು ಬಿಜೆಪಿಗೆ ಪರ್ಯಾಯವಿದ್ದುದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಬಿಜೆಪಿಗೆ ಸಹಾಯ ಮಾಡಲಷ್ಟೇ ಚುನಾವಣೆಗಳಿಗೆ ಸ್ಪರ್ಧಿಸುತ್ತದೆ. ಬಿಜೆಪಿ ಗೆಲ್ಲಿಸುವುದು ಅದರ ತಂತ್ರಗಾರಿಕೆಯಾಗಿದೆ. ಇಂದು, ಜನರಿಗೆ ಪರ್ಯಾಯ ಪಕ್ಷ ದೊರಕಿದೆ. ಆಮ್ ಆದ್ಮಿ ಪಾರ್ಟಿಯನ್ನು ಅವರು ಪರ್ಯಾಯ ಪಕ್ಷವಾಗಿ ಮಾತ್ರ ನೋಡುತ್ತಿಲ್ಲ, ಭರವಸೆಯಿಂದಲೂ ನೋಡುತ್ತಿದ್ದಾರೆ ಎಂದು ಅವರು ಹೇಳಿದರು.