ರೈತ ಹೋರಾಟ | ‘ಟೂಲ್ ಕಿಟ್’ ಕೇಸ್; ದಿಶಾ ರವಿ ಬಳಿಕ, ಮತ್ತೊಬ್ಬ ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತೆಗೆ ಬಂಧನಾದೇಶ ಜಾರಿ

Prasthutha|

ನವದೆಹಲಿ : ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಅಂತಾರಾಷ್ಟ್ರೀಯ ಹವಾಮಾನ ಹೋರಾಟಗಾರ್ತಿ ಗ್ರೆಟಾ ಥಂಬರ್ಗ್ ಟ್ವಿಟರ್ ನಲ್ಲಿ ಶೇರ್ ಮಾಡಿದ್ದ ‘ಟೂಲ್ ಕಿಟ್’ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ 22ರ ಹರೆಯದ ದಿಶಾ ರವಿ ಬಂಧನದ ಬೆನ್ನಲ್ಲೇ, ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತೆ, ನ್ಯಾಯವಾದಿಗೆ ಬಂಧನಾದೇಶ ಜಾರಿಯಾಗಿದೆ. ಸಾಮಾಜಿಕ ಕಾರ್ಯಕರ್ತೆ, ನ್ಯಾಯವಾದಿ ನಿಕಿತಾ ಜಾಕೊಬ್ ಮತ್ತು ಶಂತನು ಅವರಿಗೆ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.

- Advertisement -

ಗ್ರೆಟಾ ಥಂಬರ್ಗ್ ಶೇರ್ ಮಾಡಿದ್ದ ‘ಟೂಲ್ ಕಿಟ್’ ಹಿಂದಿರುವ ಸಂಘಟನೆ ‘ಪೋಯೆಟಿಕ್ ಜಸ್ಟೀಸ್’ ನಿಕಿತಾ ಜಾಕೊಬ್ ರನ್ನು ಸಂಪರ್ಕಿಸಿ, ರೈತರ ಹೋರಾಟಕ್ಕೆ ಸಂಬಂಧಿಸಿ ಗಣರಾಜ್ಯೋತ್ಸವಕ್ಕೆ ಮುಂಚಿತವಾಗಿ ‘ಟ್ವೀಟ್ ಸ್ಟಾರ್ಮ್’ವೊಂದನ್ನು ಆಯೋಜಿಸಲು ಕೋರಿತ್ತು ಎಂದು ಆಪಾದಿಸಲಾಗಿದೆ. ‘ಪೋಯೆಟಿಕ್ ಜಸ್ಟೀಸ್’ ಖಲಿಸ್ತಾನಿ ಪರ ಸಂಘಟನೆ ಎಂದು ಪೊಲೀಸರು ಹೇಳಿರುವುದಾಗಿ ವರದಿಯೊಂದು ತಿಳಿಸಿದೆ.

ದೇಶದ್ರೋಹ ಮತ್ತು ಸಂಚು ಆರೋಪದಲ್ಲಿ ಬೆಂಗಳೂರಿನ ದಿಶಾ ರವಿ ಬಂಧನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ನಡುವೇ, ಇನ್ನಿಬ್ಬರ ವಿರುದ್ಧ ಬಂಧನಾದೇಶ ಜಾರಿಯಾಗಿದೆ.

- Advertisement -

ದಿಶಾ ರವಿ ಅವರನ್ನು ನಿನ್ನೆ ದೆಹಲಿ ಪೊಲೀಸರು ಬಂಧಿಸಿದ್ದರು. ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ‘ಟೂಲ್ ಕಿಟ್’ ತಯಾರಿಸುವಲ್ಲಿ ಮತ್ತು ಹರಡುವಲ್ಲಿ ಆಕೆ ಪ್ರಮುಖ ಪಾತ್ರ ನಿರ್ವಹಿಸಿದ್ದಾಳೆ ಎಂದು ಪೊಲೀಸರು ಆಪಾದಿಸಿದ್ದಾರೆ.  

ಆದರೆ, ಈ ಆರೋಪಗಳನ್ನು ದಿಶಾ ರವಿ ನಿರಾಕರಿಸಿದ್ದಾರೆ. “ನಾನು ಟೂಲ್ ಕಿಟ್ ತಯಾರಿಸಿಲ್ಲ. ನಾವು ರೈತರನ್ನು ಬೆಂಬಲಿಸಿದ್ದೆವು. ಫೆ.3ರಂದು ನಾನು ಎರಡು ಸಾಲು ತಿದ್ದಿದ್ದೆ” ಎಂದು ದಿಶಾ ರವಿ ಕೋರ್ಟ್ ಗೆ ಹೇಳಿರುವುದಾಗಿ ವರದಿಯಾಗಿದೆ.

ಫೋಟೊ ಕೃಪೆ : ಎನ್ ಡಿಟಿವಿ



Join Whatsapp