ನವದೆಹಲಿ : ಜಾರಿ ನಿರ್ದೇಶನಾಲಯ (ಈಡಿ) ಆರೆಸ್ಸೆಸ್ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆರೋಪಿಸಿದೆ. ಈ ಕುರಿತು ಅದು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ.
ಲಕ್ನೋದ ವಿಶೇಷ ಪಿಎಂಎಲ್ ಎ ನ್ಯಾಯಾಲಯದ ಮುಂದೆ ಅಕ್ರಮ ಹಣ ಗಳಿಕೆ ತಡೆ ಕಾಯ್ದೆ 2002 (ಪಿಎಂಎಲ್ ಎ)ಯ ನಿಬಂಧನೆಗಳ ಅಡಿಯಲ್ಲಿ ಪಾಪ್ಯುಲರ್ ಫ್ರಂಟ್ ಪದಾಧಿಕಾರಿಗಳು ಮತ್ತು ಅದರ ಸದಸ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ, ತಾನು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಪಾದಿಸಿದೆ. ಆದಾಗ್ಯೂ, ಪ್ರಕಟನೆಯಲ್ಲಿ ಹೇಳಲಾದ ವಿವರಗಳನ್ನು ಗಮನಿಸುವುದಾದರೆ, ನಮ್ಮ ಸಂಘಟನೆಯ ಬಗ್ಗೆ ಮಾಧ್ಯಮ ಮತ್ತು ಸಮಾಜದ ದಾರಿ ತಪ್ಪಿಸುವ ಪಿತೂರಿಯ ಪ್ರಯತ್ನಗಳು ನಡೆದಿವೆ ಎಂಬುದು ಸ್ಪಷ್ಟವಾಗುತ್ತದೆ. ಕಳೆದ ಹಲವು ತಿಂಗಳುಗಳಿಂದ ಸಂಘಟನೆಯ ಬಗ್ಗೆ ಈಡಿ ತನಿಖೆ ನಡೆಸುತ್ತಿದೆ ಎಂಬುದು ತಿಳಿದಿರುವ ವಾಸ್ತವವಾಗಿದೆ ಮತ್ತು ಇದು ಸಂಘಟನೆಯ ನಾಯಕತ್ವವನ್ನು ಆಂತರಿಕವಾಗಿಯೂ, ಬಾಹ್ಯವಾಗಿಯೂ ಅರಿತಿದೆ. ಆದರೂ, ಪತ್ರಿಕಾ ಪ್ರಕಟನೆಯಲ್ಲಿ ಸಂಪೂರ್ಣ ಸುಳ್ಳು ಪ್ರತಿಪಾದನೆಗಳನ್ನು ಮಾಡಲಾಗಿದೆ ಎಂದು ಪಾಪ್ಯುಲರ್ ಫ್ರಂಟ್ ತಿಳಿಸಿದೆ.
ಇತರ ಸಂಘಟನೆಗಳ ಸದಸ್ಯರು/ಪದಾಧಿಕಾರಿಗಳನ್ನು ಪಾಪ್ಯುಲರ್ ಫ್ರಂಟ್ ನ ಪದಾಧಿಕಾರಿಗಳಾಗಿ ಬಿಂಬಿಸಲಾಗಿದೆ. ಇದು ಅರಿಯದೇ ಮಾಡಿದ ತಪ್ಪೇನೂ ಅಲ್ಲ. ಪಾರದರ್ಶಕ ತನಿಖೆಗಳ ಮೂಲಕ ತನ್ನ ಪ್ರಕರಣವನ್ನು ಸಾಬೀತುಪಡಿಸುವ ಬದಲು, ಈಡಿ ಹತ್ರಾಸ್ ನಲ್ಲಿನ ಕಾಲ್ಪನಿಕ “ಜಾತಿ ಹಿಂಸಾಚಾರದ ಪ್ರಚೋದನೆ”ಯಂತಹ ಕಲ್ಪಿತ ಮತ್ತು ರಾಜಕೀಯಪ್ರೇರಿತ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ನ ಹೆಸರನ್ನು ಎಳೆದು ತರುವುದನ್ನು ಮುಂದುವರಿಸಿದೆ. ಈ ವಿಚಾರವು ಒಂದು ತನಿಖಾ ಸಂಸ್ಥೆಯಾಗಿ ಈಡಿ ಶೂನ್ಯ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪಾಪ್ಯುಲರ್ ಫ್ರಂಟ್ ನ ಹೆಸರು ಕೆಡಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈಡಿಯ ಮೇಲೆ ಒತ್ತಡ ಹೇರುತ್ತಿದೆ. ಪಾಪ್ಯುಲರ್ ಫ್ರಂಟ್ ಅನ್ನು ಗುರಿಪಡಿಸುವ ಈಡಿಯ ಈ ವರ್ತನೆಯು, ಇದು ಕೇವಲ ಆರೆಸ್ಸೆಸ್ ನ ಹಿತಾಸಕ್ತಿಗನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಪಾಪ್ಯುಲರ್ ಫ್ರಂಟ್ ಆಪಾದಿಸಿದೆ.